ಬೆಂಗಳೂರು, ಮೇ 20, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಿಂದು ಪ್ರತಿಭಟನೆ ನಡೆಸಿದರು.ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಸರ್ಕಾರದ ನೀತಿ ನಿರೂಪಣೆ ವಿರುದ್ಧ ಹರಿಹಾಯ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಅನಿವಾರ್ಯವಾಗಿ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯನ್ನು ವಿಧಾನಸೌಧದ ಕೊಠಡಿಯಲ್ಲಿ ಮಾಡುವುದು ವಾಡಿಕೆ. ಆದರೆ ಅದಕ್ಕೂ ಸರ್ಕಾರ ಅವಕಾಶ ನೀಡಿಲ್ಲ. ಇನ್ನು ಭಾನುವಾರ ಕರ್ಫ್ಯೂ ಕೂಡ ವಿಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೊರೊನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೋಗಸ್ ಪ್ಯಾಕೇಜ್ ಘೋಷಣೆ ಮಾಡಿವೆ. ಈವರೆಗೂ ಒಂದು ಸಾವಿರ ರೂಪಾಯಿ ಯಾರಿಗೂ ನೀಡಿಲ್ಲ. ಬ್ಯಾಂಕ್ ಗಳ ಸಾಲ ನೀಡಲು ಇವರೇ ಬೇಕಿರಲಿಲ್ಲ. ಬಜೆಟ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿ, ಶಹಬಾಸ್ ಗಿರಿ ಪಡೆದಿದ್ದಾರೆ. ದೇಶದ ಅವಾಂತರಗಳಿಗೆ ಇವರೇ ಕಾರಣ. ರೈತರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ಪಂಚಾಯಿತಿ ಚುನಾವಣಾ ಸಿದ್ಧತೆ ಆಗಿಲ್ಲ. ವಿಶ್ವದ ಅನೇಕ ಕಡೆ ಚುನಾವಣೆ ನಡೆಯುತ್ತಿದೆ. ಪಂಚಾಯತ್ ಕಾಯ್ದೆ ಅನ್ವಯ ಚುನಾವಣೆ ನಡೆಸಬೇಕು. ಇಲ್ಲದಿದ್ದರೇ ಈಗಿರುವ ಸದಸ್ಯರನ್ನೇ ಮುಂದುವರಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.
ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಆಹಾರ ಕಿಟ್ ಸರಿಯಾಗಿ ವಿತರಣೆ ಮಾಡಿಲ್ಲ.
ಇಡೀ ವಿಶ್ವದಲ್ಲಿ ಕೊರೊನಾ ವಿಚಾರವನ್ನು ಗಂಭೀರವಾಗಿ ನಡೆದುಕೊಳ್ಳುತ್ತಿದ್ದು, ನಮ್ಮಲ್ಲಿ ಮಾತ್ರ ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ. ಬ್ಯಾಂಕುಗಳಿಗೆ ಮೊದಲು ಕೊಟ್ಟ ಭರವಸೆ ಈಡೇರಿಸಬೇಕು. ವಿದ್ಯುತ್ ಬಿಲ್ ಏರಿಕೆ ಬಗ್ಗೆಯೂ ಸರ್ಕಾರ ಗಮನಹರಿಸಬೇಕು. ಬಡ್ಡಿ ಮನ್ನಾ ಮಾಡಬೇಕು. ಸಾಮಾನ್ಯ ಜನರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಇದುವರೆಗೂ ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದೇವೆ. ಆದರೆ ಸರ್ಕಾರದ ದುರಾಡಳಿತ ಮುಂದುವರೆಸಿದ್ದು, ಬಹಳ ದಿನ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಸಲಹೆ ಕೊಟ್ಟು ಈ ಸಂಬಂಧ ಮುಖ್ಯಮಂತ್ರಿಗಳಿಗೆ 15-20 ಪತ್ರಗಳನ್ನ ಬರೆದಿದ್ದೀನಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಸೌಜನ್ಯಕ್ಕೂ ಒಂದೇ ಒಂದು ಉತ್ತರವನ್ನೂ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮೊದಲು ತಬ್ಲಿಘಿಗಳಿಂದ ಸೋಂಕು ಹರಡಿದೆ ಎಂದರು. ಈಗ ಮುಂಬೈ ನಿಂದ ಬಂದವರಿಂದ ಬಂದಿದೆ ಎನ್ನುತ್ತಿದ್ದಾರೆ. ಹೊರ ರಾಜ್ಯದಲ್ಲಿರುವ ನಮ್ಮ ಕಾರ್ಮಿಕರು ನಮ್ಮ ರಾಜ್ಯಕ್ಕೆ ಬರಲಿ. ಅವರನ್ನು ಮೊದಲೇ ಪರೀಕ್ಷಿಸಿ ಹೊರಗಿನ ಭಾಗದಲ್ಲಿ ಕ್ವಾರೆಂಟೈನ್ ಮಾಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.
ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ನಿರ್ಣಯದಂತೆ ಪ್ರತಿಭಟನೆ ಮಾಡಲಾಗಿದೆ. ಆದರೆ 144 ಸೆಕ್ಷನ್ ಜಾರಿಯಲ್ಲಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಪೊಲೀಸರು ಬೇಕಾದರೆ ನಮ್ಮನ್ನು ದಸ್ತಗಿರಿ ಮಾಡಲಿ ಎಂದು ಸವಾಲು ಹಾಕಿದರು.ಬಿಜೆಪಿ ನಾಯಕರು ದೇಶದ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಇದನ್ನು ನೋಡಿಯೂ ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದೇವೆ.
ಜನತೆಯ ಆರೋಗ್ಯ ಕುರಿತು ಸರ್ಕಾರಕ್ಕೆ ಪತ್ರ ಬರೆದರೂ ಉಪಯೋಗವಾಗಿಲ್ಲ. ಕಾರ್ಮಿಕರು ರೈತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎದು ಕಿಡಿಕಾರಿದರು. ಕಾರ್ಮಿಕರನ್ನು ಸರಿಯಾಗಿ ಸರ್ಕಾರ ನೋಡಿಕೊಂಡಿದ್ದರೆ ಅವರು ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ. ಕೊರೊನಾ ಎಲ್ಲಿಂದಾದರೂ ಬರಲಿ ಇದನ್ನು ತಡೆಯಲು ಸರ್ಕಾರ ಏನು ಮಾಡಿದೆ? ಜನರು ಎಲ್ಲಿಂದಾದರೂ ಬರಲಿ. ಸರ್ಕಾರ ಕೊರೊನ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು, ಸಾಂಪ್ರಾದಾಯಿಕ ಕಸುಬು ಮಾಡುವವರ ಬದುಕು ದುಸ್ತರವಾಗಿದೆ. ಅವರಿಗೂ ಈ ಸರ್ಕಾರ ಏನೂ ಮಾಡಲಿಲ್ಲ. 22 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಏನೂ ಮಾಡಿಲ್ಲವೆಂದು ಸಿದ್ದರಾಮಯ್ಯ ಕಿಡಿಕಾರಿದರು.