ಬೆಂಗಳೂರು, ಫೆ 3,ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬೆಂಗಳೂರು ನಗರ ಕಾಂಗ್ರೆಸ್ ಘಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕಾಂಗ್ರೆಸ್ ಭವನ ಮುಂಭಾಗ ಯುವ ಘಟಕ ಅಧ್ಯಕ್ಷ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಅನಂತ್ ಕುಮಾರ್ ಹೆಗಡೆ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಥಳಿಸಿ ಭಾವಚಿತ್ರಕ್ಕೆ ಬೆಂಕಿಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮನೋಹರ್ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಮಹಾತ್ಮ ಗಾಂಧೀಜಿಯವರನ್ನು ಪದೇ ಪದೇ ಅವಮಾನಿಸುತ್ತಲೇ ಇದ್ದಾರೆ. ಹಿಂದೆಯೂ ಅವಮಾನಿಸಿದ್ದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ವಿರುದ್ಧವೇ ಹೆಗಡೆ ಮಾತನಾಡಿರುವುದು ಖಂಡನೀಯ. ಈ ಹಿಂದೆ ಅವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದಾರೆ. ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ನಾಯಕರು ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗಾಂಧಿ ವಿರೋಧಿ ಎನ್ನುವುದನ್ನು ಒಪ್ಪಬೇಕು ಎಂದು ಆಗ್ರಹಿಸಿದರು.
ಅನಂತ್ ಕುಮಾರ್ ಹೆಗಡೆ ಮನಸಿಗೆ ಬಂದಂತೆ ತಮ್ಮ ನಾಲಿಗೆ ಹರಿಬಿಡುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆಯೇ ಅವಹೇಳನಕಾರಿ ಧೋರಣೆ ತಾಳಿದ್ದಾರೆ. ನೀಚಸಂಸ್ಕೃತಿಯ ಹೆಗಡೆಗೆ ಧಿಕ್ಕಾರವಿರಲಿ. ಕೂಡಲೇ ಹೆಗಡೆ ವಿರುದ್ಧ ಕ್ರಮಕೈಗೊಳ್ಳಬೇಕು, ಬಿಜೆಪಿಯಿಂದ ಅವರನ್ನು ವಜಾ ಮಾಡಬೇಕು ಎಂದು ಮನೋಹರ್ ಆಗ್ರಹಿಸಿದರು.