ಬೆಂಗಳೂರು,ಆ 24 ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಕಾಂಗ್ರೆಸ್ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ.
'ಅರುಣ್ ಜೇಟ್ಲಿ ಅವರ ಸಾವಿನ ಸುದ್ದಿ ಕೇಳಿ ತಮಗೆ ಅತೀವ ದುಃಖವಾಗಿದೆ.ಅವರು ದೇಶ ಕಂಡ ಅತ್ಯುತ್ತಮ ರಾಜಕಾರಣಿ ಹಾಗೂ ಸಂಸದಿಯ ಪಟುಗಳಲ್ಲಿ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಭಾರತದ ಸಂವಿಧಾನ, ಕಾನೂನು, ಸಾರ್ವಜನಿಕ ನೀತಿ ಹಾಗೂ ಆಡಳಿತದ ಬಗ್ಗೆ ಹೆಚ್ಚು ಪಾಂಡಿತ್ಯ ಪಡೆದುಕೊಂಡಿದ್ದರು. ಪ್ರಜಾತಂತ್ರ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಅಗಲಿಕೆ ಕೇವಲ ಒಂದು ಪಕ್ಷಕ್ಕಷ್ಟೇ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ಶೋಕಸಂದೇಶದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಅರುಣ್ ಜೇಟ್ಲಿ ಹಿರಿಯ ನಾಯಕರಾಗಿ,ಅಪ್ರತಿಮ ಸಂಸದರಾಗಿ,ಪಕ್ಷ ನಿಷ್ಟಾವಂತರಾಗಿದ್ದು.ಅಟಲ್ ಬಿಹಾರಿ ವಾಜಪೇಯಿ ಅವರ ಅನುಯಾಯಿಗಳಾದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡಿರುವುದು ಅಪಾರ ನೋವುಂಟು ಮಾಡಿದೆ ,ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೇಳಿದರು.
ಅರುಣ್ ಜೇಟ್ಲಿ ಅವರ ನಿಧನದಿಂದ ಓರ್ವ ಮುತ್ಸದಿ ರಾಜಕಾರಣಿ ಇನ್ನಿಲ್ಲದಂತಾಗಿದೆ.ಪಕ್ಷ ಸಂಘಟನೆ ಹೇಗೆ ಮಾಡಬೇಕೆಂದು ನಾಡಿಗೆ ತೋರಿಸಿದವರು ಅವರು,ಬಿಜೆಪಿ ಪಕ್ಷದ ಒಬ್ಬ ಉತ್ತಮ ರಾಜಕಾರಣಿ
ನಮಗೂ ಒಬ್ಬ ಪ್ರಬಲ ವಿರೋಧಿ ನಾಯಕನನ್ನ ಕಳೆದುಕೊಂಡಂತಾಗಿದೆ.ಸುಷ್ಮಾ ಸ್ವರಾಜ್, ಜೇಟ್ಲಿ ಪ್ರಬಲ ನಾಯಕರಾಗಿದ್ದರು ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್.ಶಂಕರ್ ಸಂತಾಪ ಸೂಚಿಸಿದ್ದಾರೆ.