ಬೆಂಗಳೂರು, ಫೆ 10, ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೆದರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಈಗಾಗಲೇ ರಾಮನಗರ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಉಳಿದುಕೊಂಡಿರುವುದು ಕನಕಪುರ ಕ್ಷೇತ್ರ ಮಾತ್ರ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ಆರ್ ಎಸ್ ಎಸ್ ಕಾರ್ಯಕರ್ತರಿಗೆ ಊಟ ಹಾಕಿಸುವುದಾಗಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಅಹಂಕಾರದ ಪರಮಾವಧಿ. ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದು, ಶಿವಕುಮಾರ್ ಊಟ ಹಾಕಿಸುವುದೇ ಆಗಿದ್ದರೆ ನಿರ್ಗತಿಕ ಕಾಂಗ್ರೆಸ್ ನಾಯಕರಿಗೆ ಊಟ ಹಾಕಿಸಲಿ ಎಂದು ತಿರುಗೇಟು ನೀಡಿದರು.ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಆರ್.ಅಶೋಕ್, ಕಪಾಲಿಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚುತ್ತಿದ್ದು, ಒಂದೇ ಕೋಮಿಗೆ ಭೂಮಿ ಹಂಚಲಾಗುತ್ತಿದೆ. ಇದರಲ್ಲಿ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ ಎಂದರು. ನಮ್ಮಂತೆ ಶಿವಕುಮಾರ್ ಸಹ ಮುನೇಶ್ವರನ ಆರಾಧಕರು. ಹೀಗಾಗಿ ಮುನೇಶ್ವರಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ ಎಂದು ಆರ್.ಅಶೋಕ್ ಮಾರ್ಮಿಕವಾಗಿ ನುಡಿದರು.