ಶಿವಸೇನಾ ಬೆಂಬಲಿಸಲು ಕಾಂಗ್ರೆಸ್, ಎನ್ ಸಿ ಪಿ ಸಮ್ಮತಿ..?

ಮುಂಬೈ, ನ 11   :       ಮಹಾರಾಷ್ಟ್ರದಲ್ಲಿ   ಕಳೆದ  15 ದಿನಗಳಿಂದ  ಮುಂದುವರಿದಿರುವ  ಸರ್ಕಾರ  ರಚನೆ   ಬಿಕ್ಕಟ್ಟು   ಒಂದು  ಹಂತಕ್ಕೆ  ತಲುಪುವ   ಸಾಧ್ಯತೆಗಳು  ಗೋಚರಿಸುತ್ತಿವೆ.  ಶಿವಸೇನೆಯನ್ನು   ಬೆಂಬಲಿಸಲು ಎನ್ಸಿಪಿ ಮತ್ತು ಕಾಂಗ್ರೆಸ್ ಒಪ್ಪಿಕೊಂಡಿವೆ  ಎಂದು ಹೇಳಲಾಗಿದೆ.   

ಇದರ ಭಾಗವಾಗಿ, ಎನ್ಸಿಪಿಗೆ  ಉಪ ಮುಖ್ಯಮಂತ್ರಿ  ಸ್ಥಾನ ಮತ್ತು ಕಾಂಗ್ರೆಸ್ ಗೆ  ವಿಧಾನಸಭೆ  ಸ್ಪೀಕರ್  ಸ್ಥಾನದಂತಹ    ಪ್ರಮುಖ ಹುದ್ದೆ    ನೀಡಲು ಶಿವಸೇನೆ ಮುಂದಾಗಿದೆ  ಎಂದು  ಮುಂಬೈ ರಾಜಕೀಯ  ವಲಯಗಳ ಮಾಹಿತಿ ಯಾಗಿದೆ.   

ಆದರೆ, ಶಿವಸೇನೆಯಿಂದ  ಇನ್ನೂ  ಈ  ಕುರಿತು  ಯಾವುದೇ ಅಧಿಕೃತ  ಹೇಳಿಕೆ  ಮಾತ್ರ  ಹೊರಬಿದ್ದಿಲ್ಲ.  ಆದರೆ,  ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವುದಾಗಿ  ಶಿವಸೇನಾ ನಾಯಕರು ಘೋಷಿಸಿದ್ದಾರೆ.   

ಉಭಯ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಶಿವಸೇನಾ ಸೇನಾ ಮುಖಂಡರು ತಿಳಿಸಿದ್ದಾರೆ.    

ಶಿವಸೇನೆಗೆ ಬೆಂಬಲ ಘೋಷಿಸಲು  ನಾವು  ಸಿದ್ಧರಿದ್ದೇವೆ ಎಂದು ಎನ್ಸಿಪಿ ಹಿರಿಯ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.   ಪಕ್ಷದ  ಮುಖ್ಯಸ್ಥರು   ಅಂತಿಮ  ನಿರ್ಧಾರ  ಪ್ರಕಟಿಸಲಿದ್ದಾರೆ  ಎಂದು   ಅವರು  ಹೇಳಿದ್ದಾರೆ. 

 ಶಿವಸೇನೆಗೆ ಬೆಂಬಲ  ನೀಡುವ ಬಗ್ಗೆ   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅಧ್ಯಕ್ಷತೆಯಲ್ಲಿ   ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸುದೀರ್ಘ  ಚರ್ಚೆ ನಡೆಸಿದೆ.  ಶಿವಸೇನೆಗೆ ಬೆಂಬಲ  ಹಾಗೂ  ಸರ್ಕಾರ ರಚನೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ  ಸಮಾಲೋಚನೆ ನಡೆಸಿದ್ದಾರೆ  ಎಂದು ಹೇಳಲಾಗಿದೆ.   

ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರನ್ನು ಕೂಡಲೇ ದೆಹಲಿಗೆ ಬರುವಂತೆ ಸೋನಿಯಾ ಗಾಂಧಿ  ಸೂಚಿಸಿದ್ದು,  ಸೋಮವಾರ ಸಂಜೆ ಅವರು ಮತ್ತೆ ಭೇಟಿಯಾಗಲಿದ್ದಾರೆ.   

ಮತ್ತೊಂದೆಡೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ನಿರ್ಧಾರಕ್ಕಾಗಿ  ಎದುರು ನೋಡುತ್ತಿದ್ದಾರೆ. ಸೋನಿಯಾ ಗಾಂಧಿ ಭೇಟಿಯ  ನಂತರ  ಅಂತಿಮ ತೀರ್ಮಾನ  ಪ್ರಕಟಿಸುವುದಾಗಿ ಪವಾರ್ ಘೋಷಿಸಿದ್ದಾರೆ. ಮತ್ತೊಂದೆಡೆ, ಶಿವಸೇನೆಗೆ ರಾಜ್ಯಪಾಲರ  ವಿಧಿಸಿರುವ  ಅಂತಿಮ  ಗಡುವು  ಸಮೀಪಿಸುತ್ತಿರುವ  ಹಿನ್ನಲೆಯಲ್ಲಿ  ಪಕ್ಷದ ಸಂಸದ ಸಂಜಯ್  ರಾವತ್ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ. ಉಭಯ ಪಕ್ಷಗಳು ಸೋಮವಾರ ಸಂಜೆ ವೇಳೆಗೆ  ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.