ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಎಂಎಂ ವದಂತಿ ಹಬ್ಬಿಸುತ್ತಿವೆ : ಪ್ರಧಾನಿ ಮೋದಿ

ಖುಂತಿ, ಡಿ ೦೩ - ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಎರಡನೆ ಹಂತದ ಮತದಾನಕ್ಕಾಗಿ ಪ್ರಚಾರ ರಂಗೇರಿದ್ದು, ಪ್ರಮುಖ ಪಕ್ಷಗಳ ಮುಖಂಡರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ

ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ರಾಜ್ಯವನ್ನು ಲೂಟಿ ಮಾಡಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಾರ್ಖಂಡ್ನಲ್ಲಿ ಅಧಿಕಾರ ಹಿಡಿಯಲು ಉಭಯ ಪಕ್ಷಗಳೂ ವದಂತಿ ಮತ್ತು ಭಯವನ್ನು ಹರಡುತ್ತಿವೆ ಎಂದು ಹೇಳಿದರು.

ಬಿರ್ಸಾ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಅವರ ಇತಿಹಾಸ ಮತ್ತು ಕಾರ್ಯಗಳ ಬಗ್ಗೆ ಈಗಾಗಲೇ ತಿಳಿದಿರುವ ಜನರು ಜಾಗರೂಕರಾಗಿರಬೇಕು. ಎರಡೂ ಪಕ್ಷಗಳು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳತ್ತ ದೃಷ್ಟಿ ಇಟ್ಟುಕೊಂಡಿವೆ ಮತ್ತು ಜೆಎಂಎಂ ಮತ್ತು ಕಾಂಗ್ರೆಸ್ ನಾಯಕರು ಈ ಪ್ರದೇಶದಲ್ಲಿ ಕೈಗಾರಿಕೀಕರಣ ಮತ್ತು ಅಭಿವೃದ್ಧಿಯನ್ನು ಬಯಸುವುದಿಲ್ಲ ಏಕೆಂದರೆ ಜನರು ಹಣವನ್ನು ಪಡೆಯಲು ಪ್ರಾರಂಭಿಸಿದರೆ ಅವರು ತಮ್ಮ ಪ್ರಾಮುಖ್ಯತೆಯನ್ನು ಕಳೆದುಹೋದೀತು ಎಂದು ಭಾವಿಸಿವೆ ಎಂದರು.

      "ಚುನಾವಣೆಯ ದಿನದಂದು ನಿಮ್ಮ ಹತ್ತಿರದ ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಮತ ಚಲಾಯಿಸುವ ಮೂಲಕ ಈ ಪಕ್ಷಗಳು ಹರಡುತ್ತಿರುವ ನಕಲಿ ವದಂತಿಗಳನ್ನು ತಿರಸ್ಕರಿಸುತ್ತೀರಿ ಎಂಬ ವಿಶ್ವಾಸವಿದೆ" ಎಂದ ಪ್ರಧಾನಿ, ಕಮಲ ಚಿಹ್ನೆಯನ್ನು ಒತ್ತು ಮೂಲಕ  ಜಾರ್ಖಂಡ್ ರಾಜ್ಯದ ಅಭಿವೃದ್ಧಿ ಮುಂದುವರಿಸಲು ಶಕ್ತಿ ತುಂಬುವಂತೆ ಮನವಿ ಮಾಡಿದರು. 

ಜಾರ್ಖಂಡ್ ಜನರು ಪ್ರಜಾಪ್ರಭುತ್ವವನ್ನು ನಂಬುತ್ತಾರೆ ಮತ್ತು ಅವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸಲು ಬಯಸುತ್ತಾರೆ. ಜಾರ್ಖಂಡ್‌ನ ಬಿಜೆಪಿ ಸರ್ಕಾರವು ಸಣ್ಣ ಪ್ರದೇಶಕ್ಕೆ ಸೀಮಿತವಾಗಿದ್ದ ಮಾವೋವಾದಿಗಳ ಬೆನ್ನೆಲುಬನ್ನು ಮುರಿದಿದೆ, ಇದರಿಂದಾಗಿ ಜನರಲ್ಲಿ ಭಯ ಕಡಿಮೆಯಾಗಿದೆ ಮತ್ತು ಅಭಿವೃದ್ಧಿ ನಡೆಯುತ್ತಿದೆ ಎಂಬ ಅಂಶಗಳು ಮೊದಲ ಹಂತದ ಮತದಾನದಿಂದ ಸಾಬೀತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.