ಬೆಂಗಳೂರು, ಮೇ 11,ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪಕ್ಕೆ ಸರ್ಕಾರ ಕಟಿಬದ್ಧವಾಗಿದ್ದು ಮಾರ್ಚ್ 2021 ಕ್ಕೆ ಮೊದಲ ಹಂತದ ಯೋಜನೆ ಆರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.ಎತ್ತಿನಹೊಳೆ ಯೋಜನೆ ಕುರಿತಂತೆ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದ ಸಚಿವರು, 5 ಸಿವಿಲ್ ಮತ್ತು 2 ಎಲೆಕ್ಟ್ರಿಕಲ್ ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಲಮಿತಿಯೊಳಗೆ ವಿದ್ಯುತ್ ಶಕ್ತಿ ಪೂರೈಸುವ ಕಾಮಗಾರಿ ಪೂರ್ಣಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯ ಹಲವಾರು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ರೈತರ ಮನ ಒಲಿಸಿ ಪರಿಹಾರ ನೀಡಬೇಕು.ಯೋಜನೆಯ ಮೊದಲ ಹಂತ ಮುಂದಿನ ವರ್ಷದ ಮಾರ್ಚ್ ಒಳಗೆ ಮುಗಿಯಲೇಬೇಕು. ಮುಂದಿನ ಮಳೆಗಾಲದಲ್ಲಿ ನೀರು ಹರಿಸುವಂತಾಗಬೇಕೆಂದು ಸಚಿವರು ಸೂಚಿಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ರಾವ್ ಪೇಶ್ವೆ ಸೇರಿದಂತೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.