ನವದೆಹಲಿ, ಜ ೨೭: ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಆಗ, ಭಾರತೀಯ ರೈಲ್ವೆ ವಿಶ್ವದ ಮೊದಲ ಸಂಪೂರ್ಣ ವಿದ್ಯುದ್ದೀಕೃತ ರೈಲ್ವೆ ಆಗಲಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಸೋಮವಾರ ನಡೆದ ಭಾರತ-ಬ್ರೆಜಿಲ್ ಉದ್ಯಮ ವೇದಿಕೆಯಲ್ಲಿ ಪಾಲ್ಗೊಂಡು ಸಚಿವ ಗೋಯಲ್ ಮಾತನಾಡುತ್ತಿದ್ದರು.
ಭಾರತೀಯ ರೈಲ್ವೆ ಜಾಲವನ್ನು ಶೇ. ೧೦೦ರಷ್ಟು ವಿದ್ಯುದೀಕರಣಗೊಳಿಸಲಿದ್ದೇವೆ. ಈ ಕೆಲಸವನ್ನು ೨೦೨೪ ವೇಳೆಗೆ ಪೂರ್ಣಗೊಳಿಸಲಿದ್ದೇವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಎಲ್ಲಾ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗುವುದು. ಈ ಕಾರ್ಯಪೂರ್ಣಗೊಂಡರೆ ವಿಶ್ವದ ಸಂಪೂರ್ಣ ವಿದ್ಯುದ್ದೀಕೃತ ರೈಲ್ವೆ ಎಂಬ ಹೆಗ್ಗಳಿಕೆಗೆ ಭಾರತೀಯ ರೈಲ್ವೆ ಪಾತ್ರವಾಗಲಿದೆ. ಈ ಉದ್ದೇಶಕ್ಕಾಗಿ ಶುದ್ಧ ಇಂಧನ ಬಳಸಲಿದ್ದೇವೆ ಎಂದು ಪಿಯೂಷ್ ಗೋಯೆಲ್ ಹೇಳಿದರು.
ಇನ್ನೂ ಬ್ರೆಜಿಲ್‌ನೊಂದಿಗಿನ ಭಾರತದ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಪಿಯೂಷ್ ಗೋಯೆಲ್, ಉಭಯ ದೇಶಗಳು ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಹೇಳಿದರು.