ಬೆಂಗಳೂರು, ಆ 3 ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಸುಳ್ಳು ಮಾಹಿತಿ ನೀಡಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ಬಿಜೆಪಿ ವಕ್ತಾರ ಎನ್.ರಮೇಶ್ ಜಮೀರ್ ವಿರುದ್ಧ ದೂರು ನೀಡಿದವರು.
2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಮೂನೆ 26 ರ ಪ್ರಮಾಣ ಪತ್ರದ ಕ್ರಮಸಂಖ್ಯೆ-08 ರಲ್ಲಿ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರಿಂದ 42 ಲಕ್ಷ ರೂ.ಗಳನ್ನು ಸಾಲ ಪಡೆದಿರುವುದಾಗಿ ಜಮೀರ್ ಘೋಷಿಸಿಕೊಂಡಿದ್ದಾರೆ.
ಆದರೆ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಚೆಲುವರಾಯಸ್ವಾಮಿ ಅವರು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ಜಮೀರ್ ಅವರಿಗೆ ಯಾವುದೇ ಸಾಲ ನೀಡದಿರುವ ಬಗ್ಗೆ ಘೋಷಣೆ ಮಾಡಿಲ್ಲ.
ಆದ್ದರಿಂದ ಜಮೀರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳುಮಾಹಿತಿ ನೀಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜಮೀರ್ ಅಹ್ಮದ್ ಖಾನ್ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಂಬಂಧ ಕಾನೂನು ರೀತ್ಯಾ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎನ್.ಆರ್.ರಮೇಶ್ ಮನವಿ ಮಾಡಿದ್ದಾರೆ.