ವಿಜಯಪುರ 11: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಅದರಲ್ಲಿ ಸರ್ಕಾರಿ ನೌಕರಿ ಎಂಬುದು ಮರೀಚಿಕೆಯಾಗಿದೆ. ವಿದ್ಯಾರ್ಥಿಗಳು ಖಾಸಗಿ ಕ್ಷೇತ್ರಗಳತ್ತ ಮುಖಮಾಡುತ್ತಿದ್ದಾರೆ. ಖಾಸಗಿ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ಲರಿಕಲ್, ಪ್ರೊಬೆಷನರಿ ಆಫೀಸರ್, ಫೀಲ್ಡ್ ಆಫೀಸರ್, ಮ್ಯಾನೇಜರನಂತಹ ಹುದ್ದೆಗಳಿಗೆ ನಡೆಯುವ ಲಿಖಿತ ಪರೀಕ್ಷೆಗಳು ಮತ್ತು ಸಂದರ್ಶನದಲ್ಲಿ ಯಶಸ್ಸು ಹೊಂದುವುದು ಅತಿ ಅವಶ್ಯಕ. ಆದ್ದರಿಂದ ವಿದ್ಯಾರ್ಥಿಗಳು ತಾವು ಪಡೆದ ಪದವಿಯ ಜೊತೆಗೆ ವಿಷಯ ಜ್ಞಾನ, ಪ್ರತಿಭೆ, ಸಂವಹನ ಕೌಶಲ್ಯ, ಕಂಪ್ಯೂಟರ್ ಜ್ಞಾನ, ವಿಶ್ಲೇಷಣೆ, ತಾರ್ತಿಕ ಶಕ್ತಿ-ಅಪ್ಟಿಟ್ಯೂಡ್ ಸಾಮರ್ಥ್ಯ, ಸಂದರ್ಶನ ಕಲೆ, ವಾಕ್ಚಾತುರ್ಯದೊಂದಿಗೆ ಸತತ ಪ್ರಯತ್ನ, ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಕಾರಾತ್ಮಕ ಚಿಂತನೆ, ಸಾಧಿಸಿಯೇ ತೀರುತ್ತೇನೆಂಬ ಅಚಲ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಾ ಕೋಶ, ಮತ್ತು ಪ್ಲೇಸಮೆಂಟ್ ಸೆಲ್ ಸಹಯೋಗದಲ್ಲಿ ಜರುಗಿದ “ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ ” ವಿಷಯ ಕುರಿತ ಐದು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಹಿರಿಯ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ, ಬಡ ಮತ್ತು ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮಥ್ಯ ಬೆಳೆಸಬೇಕಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಮಾನಸಿಕ-ಬೌದ್ಧಿಕ ಸಾಮರ್ಥ್ಯ, ಆಂಗ್ಲುಭಾಷೆ, ಪ್ರಚಲಿತ ವಿದ್ಯಮಾನ, ವಿಜ್ಞಾನ, ಇತಿಹಾಸ, ಭಾರತ ಸಂವಿಧಾನ, ಅರ್ಥಶಾಸ್ತ್ರ ಇನ್ನಿತರ ವಿಷಯಗಳಲ್ಲಿ ಪಡೆದ ಮಾಹಿತಿ ಆಧರಿಸಿ ಲಿಖಿತ ಪರೀಕ್ಷೆ ನಡೆಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಯ ಜತೆಗೆ ಸಂದರ್ಶನ ಕಲೆ, ಉದ್ಯೋಗ-ಮಾರ್ಗದರ್ಶನ, ತರಬೇತಿ ನೀಡಿ, ತನ್ಮೂಲಕ ಅವರು ಉದ್ಯೋಗ ಕಂಡಕೊಂಡು ಆರ್ಥಿಕ ಸ್ವಾವಲಂಬಿಯಾಗುವಂತೆ ಮಾಡುವುದು ಕಾಲೇಜಿನ ಪ್ಲೇಸಮೆಂಟ್ ಸೆಲ್ ಉದ್ಯೇಶವಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಅನೇಕ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಅವರಲ್ಲಿರುವ ಪ್ರತಿಭೆ ಅನಾವರಣಗೊಂಡು ಸೂಕ್ತ ವೇದಿಕೆಯ ಮೇಲೆ ಉದ್ಯೋಗ-ಮಾರ್ಗದರ್ಶನ ತರಬೇತಿ ನೀಡುತ್ತಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ. ಬ್ಯಾಂಕಿಂಗ್. ವಿಮೆ, ಕೈಗಾರಿಕೆ, ಷೇರು ಮಾರುಕಟ್ಟೆ, ಟ್ರೇಡಿಂಗ್ ಬಿಸಿನೆಸ್ ಕ್ಷೇತ್ರದಲ್ಲಿ ದೊರೆಯುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ. ಆರ್.ಎಸ್.ಕುರಿ, ಪ್ಲೇಸಮೆಂಟ್ ಸೆಲ್ ಸಂಚಾಲಕ ಪ್ರೊ. ಎಸ್.ಎಸ್.ಯರನಾಳ, ಡಾ. ಬಿ.ಎನ್.ಶಾಡದಳ್ಳಿ, ಡಾ. ಚಂದ್ರಕಾಂತ. ಬಿ. ಅವರು ವೇದಿಕೆಯ ಮೇಲಿದ್ದರು.