ಬೆಂಗಳೂರು, ಮೇ 12,ಅಜ್ಜಿಗೆ ಮೊಮ್ಮಗಳ ಚಿಂತೆಯಾದರೆ, ಮೊಮ್ಮಗಳಿಗೆ ಬೇರೆ ಏನೋ ಚಿಂತೆ ಎನ್ನುವ ಮಾತಿನಂತೆ, ಇಡೀ ಪ್ರಪಂಚವೇ ಮಾರಕ ಮಹಾಮಾರಿ ಕೊರೊನಾವನ್ನು ಯಾವ ರೀತಿ ನಿಯಂತ್ರಿಸಬಹುದು ಎಂದು ವೈದ್ಯಕೀಯ ಲೋಕ ತಲೆಕೆಡಿಸುತ್ತಿರುವ ಸಂದರ್ಭದಲ್ಲಿ ಭಾರತೀಯ ಮಾಧ್ಯಮ ಮಾತ್ರ, ಅದನ್ನು "ನಿಝಾಮುದ್ದೀನ್ ತಬ್ಲೀಗ್ ವೈರಸ್" ಎಂದು ಮತಾಂತರಗೊಳಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ತಾಜುದ್ದಿನ್ ಇಲಕಲ್ ಅವರು ಕೆಲ ಮಾಧ್ಯಮಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರೂ ಸುಧಾರಿಸಿಕೊಳ್ಳದ ಮಾಧ್ಯಮಗಳ ಕಾರ್ಯವೈಖರಿ ಸಮಾಜದ ಶಾಂತಿ ಕದಡುವತ್ತ ದಾಪುಗಾಲು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಇದೀಗ "ಅಜ್ಮೀರ್ ಕೊರೊನ" ಎಂಬ ಹೊಸ ಸಂಶೋಧನೆಯನ್ನು ಮಾದ್ಯಮಗಳು ಸೃಷ್ಟಿ ಮಾಡುತ್ತಿದೆ. ಭಾರತವನ್ನು ಹೊರತುಪಡಿಸಿ ವಿಶ್ವದಾದ್ಯಂತದ ಎಲ್ಲಾ ಮಾಧ್ಯಮಗಳು ಕೊರೊನಾ ಸೋಂಕು ತೊಲಗಿಸಲು ಆರೋಗ್ಯ ಕಾರ್ಯಕರ್ತರೊಂದಿಗೆ ಸಹಕರಿಸುತ್ತಿದ್ದರೆ, ಭಾರತದ ಮಾಧ್ಯಮಗಳು ಕೋಮು ಬಣ್ಣ ಹಚ್ಚಿ ಕೊರೋನಾವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಈ ಮಾಧ್ಯಮಗಳಿಗೆ ಮಾಧ್ಯಮ ಧರ್ಮದ ಬಗ್ಗೆ ತಿಳಿದಿಲ್ಲವೇ? ಅಥವಾ ಸರಕಾರದ ಅನುಮತಿಯಿಂದ ಇಂತಹ ವಾರ್ತೆಗಳನ್ನು ಸೃಷ್ಟಿ ಮಾಡುತ್ತಿವೆಯೇ ?ಒಟ್ಟಿನಲ್ಲಿ ಮಾದ್ಯಮ ಧರ್ಮವನ್ನು ಬಿಟ್ಟು ಇಂತಹ ನೀಚ ಮಾಧ್ಯಮ ವೃತ್ತಿ ಖಂಡನೀಯ. ಇಂತಹ ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಡಬೇಕಾದ ಸರಕಾರವೇ ಮೌನವಹಿಸುತ್ತಿರುವುದು ನೋಡಿದರೆ ಇನ್ನೂ ಸಂಶಯ ಮೂಡಿಸುತ್ತಿದೆ.ಆದ್ದರಿಂದ ಕೂಡಲೇ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರ ಇಂತಹ ಹೊಲಸು ಮತ್ತು ಕೋಮುವಾದಿ ಮಾಧ್ಯಮದವರ ಮೇಲೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.