ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸಮಿತಿ ಪತ್ರಿಕಾಗೋಷ್ಠಿ
ಬೆಳಗಾವಿ ಡಿ.16 : ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಕೆರಳಾ, ಆಂಧ್ರ್ರದೇಶದ ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿಪರ ಬದಲಾವಣೆ ತರುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಗಡಿ ಭಾಗದ ಅಭಿವೃದ್ಧಿಗಾಗಿ ಆಯಾ ರಾಜ್ಯಗಳಿಗೆ ಪ್ರತಿ ವರ್ಷ ಅನುದಾನ ಕೂಡ ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ (ಡಿ.16) ಗಡಿ ಭಾಗದ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮಹಾರಾಷ್ಟ್ರ ಸರಕಾರ ಕರ್ನಾಟಕದಲ್ಲಿ ಮರಾಠಿ ವಿದ್ಯಾಭ್ಯಾಸ ಮಾಡಿದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 5ಅ ಮೀಸಲಾತಿ ನೀಡಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕೂಡ ಮಹಾರಾಷ್ಟ್ರದಲ್ಲಿ ಕನ್ನಡ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 5ಅ ವಿಶೇಷ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಗಡಿ ಭಾಗದ ಜನರಿಂದ ಬೇಡಿಕೆಯಿದೆ ಎಂದರು.
ಮಹಾರಾಷ್ಟ್ರದ ಒಂದು ಪ್ರದೇಶಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಭೇಟಿ ನೀಡಿದಾಗ ಮಹಾರಾಷ್ಟ್ರ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಭಾಷಾ ಶಿಕ್ಷಕರನ್ನು ನೇಮಕ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕನ್ನಡ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪ್ರಮುಖವಾದ ಸುಮಾರು 11 ಸಮಸ್ಯೆಗಳ ಪಟ್ಟಿ ತಯಾರಿಸಿ ಮುಖ್ಯಮಂತ್ರಿಗಳು ಈಗಾಗಲೇ ಪತ್ರ ಬರೆಯಲಾಗಿದೆ.
2010-11 ರಲ್ಲಿ ಪ್ರಾರಂಭವಾದ ಗಡಿ ಅಭಿವೃದ್ಧಿ ಪ್ರಾಧಿಕಾರ ಗಡಿ ಭಾಗದ ಉಳಿವಿಗೆ ಸಾಕಷ್ಟು ಶ್ರಮಿಸುತ್ತಿದೆ. ಕನ್ನಡ ಶಾಲೆ, ಕನ್ನಡ ಭೋದನೆಗೆ ಸ್ಮಾರ್ಟ್ ಕ್ಲಾಸ್, ರಸ್ತೆ, ಕುಡಿಯುವ ನೀರು ಸೇರಿದಂತೆ ಗಡಿ ಭಾಗದ ಅಭಿವೃದ್ಧಿಗೆ ಪ್ರಾಧಿಕಾರ ನಿರಂತರ ಸ್ಪಂದಿಸುತ್ತಿದೆ. ಗೋವಾ, ಕೇರಳ ಸೇರಿದಂತೆ ಗಡಿ ಭಾಗಗಳಿಗೆ ಭೇಟಿ ನೀಡಿ ಅಭಿವೃದ್ಧಿಪರ ಕೆಲಸಗಳನ್ನು ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಖಾಸಗಿ ನಿವೇಶನ ಖರೀದಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಕರ್ನಾಟಕ ಗಡಿ ಪ್ರಾಧಿಕಾರ ಹಿಂದಿನ ಅಧ್ಯಕ್ಷರು ಗೋವಾಕ್ಕೆ ಭೇಟಿ ನೀಡಿ ಸ್ಥಳ ಪರೀಶೀಲನೆ ಮಾಡಿರುತ್ತಾರೆ. ನಂತರ ನಿವೇಶನ ಖರೀದಿಗಾಗಿ 4ಜಿ ವಿನಾಯಿತಿ ನೀಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಗಡಿ ಭಾಗದ ಕನ್ನಡ ಉಳಿವಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರಾಧಿಕಾರದಿಂದ ಸುಮಾರು 6 ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಸಮಸ್ಯೆಗಳ ಪಟ್ಟಿ ತಯಾರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗೆ ಪರಿಸ್ಥಿತಿ ಅಷ್ಟೊಂದು ಸುಸ್ಥಿತಿಯಲ್ಲಿಲ್ಲ ಅವುಗಳನ್ನು ಸುಧಾರಣೆಗೆ ತರುವ ನಿಟ್ಟಿನಲ್ಲಿ ಅಭಿವೃಧ್ದಿ ಪರ ಯೋಜನೆಗಳನ್ನು ರೂಪಿಸಲಾಗಿದೆ.
ಕರ್ನಾಟಕದ ನಾಲ್ಕು ಭಾಗಗಳಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ರಾಜ್ಯದ 19 ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಹೇಳಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು, ಸದಸ್ಯರಾದ ಅಶೋಕ ಚಂದರಗಿ, ಸುಬ್ಬಯ್ಯ ಕಟ್ಟಿ ಸೇರಿದಂತೆ ಮತ್ತಿತ್ತರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.