ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೋರಿದ ಆಯೋಗ

Gram Panchayat Elections

ಬೆಂಗಳೂರು, ಮೇ 22-ಜೂನ್ ನಿಂದ ಆಗಸ್ಟ್ ಅವಧಿಯಲ್ಲಿ ರಾಜ್ಯದ ೫೮೦೦ ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಕಾಲ ಪಕ್ವವಾಗಿದೆಯೇ ಎನ್ನುವ ಕುರಿತು ರಾಜ್ಯ ಚುನಾವಣಾ ಆಯೋಗ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಆಯೋಗ, ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕೆ ಅಥವಾ ಬೇಡವೇ ಎನ್ನುವ ಕುರಿತು ತಮ್ಮ ಅಭಿಪ್ರಾಯ ನೀಡುವಂತೆ ಕೇಳಿದೆ.
ಕೊವೀಡ್ 19 ನಿಂದಾಗಿ ವಿಧಿಸಿರುವ ಹಲವು ನಿರ್ಬಂಧಗಳ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ, ಕ್ಷೇತ್ರ ಪುನರ್ ವಿಂಗಡಣೆ, ಸ್ಥಾನ ಮೀಸಲಾತಿ ತಿದ್ದುಪಡಿ ನಿಗಿದಿಪಡಿಸುವುದು ಸೇರಿದಂತೆ ಚುನಾವಣಾ ತಯಾರಿ ನಡೆಸಲು ಸಾಧ್ಯವಿದೆಯೇ ಎನ್ನುವ ಕುರಿತು ಇ ಮೇಲ್ ಮೂಲಕ ಜಿಲ್ಲಾಡಳಿತದ ಅಭಿಪ್ರಾಯ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.