ವಿಜಯಪುರ, ಏ.16 : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯ ಎರಡು ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಸ್ವಚ್ಛ ಅಂಗನವಾಡಿ-ಬಾಲಸ್ನೇಹಿ ಅಂಗನವಾಡಿ ಸ್ವಚ್ಛತಾ ಅಭಿಯಾನ ಬುಧವಾರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಆರಂಭಿಸಲಾಗಿರುವ ಈ ಅಭಿಯಾನದಡಿ ಪ್ರತಿವಾರ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಬರುವ ಮೂರು ಅಂಗನವಾಡಿ ಕೇಂದ್ರಗಳ ಸಂಪೂರ್ಣ ಸ್ವಚ್ಛತೆಗ ಆದ್ಯತೆ ಇಂದು ಬುಧವಾರ ಗ್ರಾಮ ಪಂಚಾಯತಿ ಮೂಲಕ ಎರಡು ಅಂಗನವಾಡಿ ಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ ಸ್ಚಚ್ಛಗೊಳಿಸುವುದು, ತ್ಯಾಜ್ಯ ವಿಲೇವಾರಿ, ಅಪಾಯಕಾರಕ ವಸ್ತುಗಳ ತೆಗೆಯುವುದು ಹಾಗೂ ಅಂಗನವಾಡಿ ಕೇಂದ್ರ ವ್ಯಾಪ್ತಿ ಗುರುತಿಸುವಿಕೆ ಕಾರ್ಯ ಹಮ್ಮಿಕೊಳ್ಳಲಾಯಿತು.
ಸಂತೋಷದಿಂದ ಮಕ್ಕಳು ಅಂಗನವಾಡಿಗಳತ್ತ ಹೆಜ್ಜೆ ಹಾಕುವ ವಾತಾವರಣ ನಿರ್ಮಾಣಕ್ಕಾಗಿ ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಿ, ಮಕ್ಕಳ ಕಲಿಕೆಗೆ ಪೂರಕವಾಗಿ ಪ್ರೇರಣೆ ಒದಗಿಸುವುದಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಕಾರ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು.
ಅಂಗನವಾಡಿಗಳು ಮಕ್ಕಳ ಶೈಕ್ಷಣಿಕ ಜೀವನದ ಬುನಾದಿ ಹಂತವಾಗಿದೆ. ಈ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಅವರ ಸುರಕ್ಷತೆ ಅಗತ್ಯವಾಗಿದೆ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಯೊಂದಿಗೆ ಮಕ್ಕಳ ಸುರಕ್ಷತೆಗೂ ಗಮನ ವಹಿಸುವ ನಿಟ್ಟಿನಲ್ಲಿ ಕೇಂದ್ರದ ಸುತ್ತಮುತ್ತ ಅಪಾಯಕಾರಿ ವಸ್ತುಗಳ ಇಲ್ಲದೇ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು. ಮಕ್ಕಳ ಸ್ನೇಹಿ ಅಂಗನವಾಡಿಗಳನ್ನಾಗಿಸಿ, ಹೈಟೆಕ್ ಸ್ಪರ್ಶ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶುದ್ಧ ಗಾಳಿ, ಶೌಚಾಲಯ ವ್ಯವಸ್ಥೆ, ಪೌಷ್ಟಿಕ ಆಹಾರ, ವಿದ್ಯುತ್ ವ್ಯವಸ್ಥೆ, ಪೀಠೋಪಕರಣಗಳು, ವಿನೂತನ ಕಲಿಕಾ ಸಾಮಗ್ರಿಗಳು, ಆಟಿಕೆ ಸಾಮಗ್ರಿಗಳ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ.
ಗ್ರಾಮ ಪಂಚಾಯತಿಯ ಲಭ್ಯ ಅನುದಾನ ಬಳಸಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಆಕರ್ಷಣೀಯ ಚಿತ್ರ (ಬಾಲಾ ಪೇಂಟಿಂಗ್)ಗಳನ್ನು ಬಿಡಿಸುವುದು, ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು, ಕೇಂದ್ರಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಬಯೋ ಫೆನ್ಸಿಂಗ್ ಕ್ರಮ ಕೈಗೊಳ್ಳುವುದು. ಅಡುಗೆ ಮತ್ತು ದಾಸ್ತಾನು ಕೊಠಡಿ ವ್ಯವಸ್ಥಿತವಾಗಿಡುವುದು. ಕೇಂದ್ರದ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ಆವರಣದಲ್ಲಿ ಪೌಷ್ಟಿಕ ತೋಟ ನಿರ್ಮಿಸುವುದು. ಅಲ್ಲಿ ಮಕ್ಕಳ ಸ್ನೇಹಿ ಶೌಚಾಲಯಗಳ ನಿರ್ಮಾಣ ಬಹುಮುಖ್ಯವಾಗಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಏಕಕಾಲದಲ್ಲಿ ಕೈಗೊಳ್ಳಲಾಗುತ್ತಿದೆ.
ಈ ಅಭಿಯಾನದ ಪೂರ್ಣಗೊಂಡ ನಂತರವೂ ಸಹ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲಾಗುವುದು. ತಿಂಗಳ ಮೊದಲನೇ ಶನಿವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.