ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಿಸಲು ನಾಗರಿಕರ ಆಗ್ರಹ

ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಿಸಲು ನಾಗರಿಕರ ಆಗ್ರಹ  Citizens demand construction of underpass for smooth and safe traffic

ಬೆಳಗಾವಿ 20ಃ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಮತಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಹಿರೇಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಿಸುವ ಯೋಜನೆಯನ್ನು ಶೀಘ್ರ ಪರೀಶೀಲನೆ ನಡೆಸಬೇಕೆಂದು ನಾಗರಿಕರು ಸಂಸದ ಜಗದೀಶ ಶೆಟ್ಟರ ಅವರನ್ನು ಆಗ್ರಹಿಸಿದ್ದಾರೆ. ಈ ಸಂಬಂಧವಾಗಿ ಅವರಿಗೆ ಮನವಿ ಸಲ್ಲಿಸಿದ ಮುಖಂಡರು ಹಿರೇಬಾಗೇವಾಡಿ ಜನರ ಈ ಬಹುದಿನಗಳ ಬೇಡಿಕೆಯ ಈಡೇರಿಕೆಗೆ ಈ ಹಿಂದಿನ ಸಂಸದ ಸುರೇಶ ಅಂಗಡಿ ಸ್ಪಂದಿಸಿದ್ದರು ಆದರೆ ಮುಂದಿನ ಆಘಾತಕಾರಿ ಬೆಳವಣಿಗೆ ಹಿನ್ನೆಲೆಯಲ್ಲಿ ಅದು ಈಡೇರದೆ ಸಮಸ್ಯೆಯ ಪರಿಹಾರ ಇನ್ನೂ ನೆನೆಗುದಿಗೆ ಬಿದ್ದಿದೆ.  

ಹೋಬಳಿ ಪಟ್ಟಣವಾಗಿರುವ ಹಿರೇಬಾಗೇವಾಡಿಯು ಸುತ್ತಮುತ್ತಲಿನ ಹಲವಾರು ಗ್ರಾಮಗಳ ಸಂಪರ್ಕ ಕೇಂದ್ರವಾಗಿದೆ. ಬಸವೇಶ್ವರ ವೃತ್ತದ ಸನಿಹದಲ್ಲಿಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿದ್ದು ದಿನನಿತ್ಯ ನೂರಾರು ವಾಹನಗಳ ಸಂಚಾರ ದಟ್ಟಣೆ ಇದೆ. ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ರಾ.ಹೆ 4 ರಸ್ತೆ ದಾಟಲೇಬೇಕು ಆಗ ಸ್ವಲ್ಪ ಹೆಚ್ಚು ಕಮ್ಮಿ ಆದರೆ ಜನರ ಪ್ರಾಣಕ್ಕೆ ಕುತ್ತು ಈಗಾಗಲೇ ಇಲ್ಲಿ ಸಾಕಷ್ಟು ಅಪಘಾತ ಮತ್ತು ಜೀವಹಾನಿ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.  

ಈ ಭಾಗಗಳಲ್ಲಿ ವಾಣಿಜ್ಯ ಸಂಕೀರ್ಣ ವ್ಯಾಪಾರ ವಹಿವಾಟು ಕೇಂದ್ರಗಳು ಮತ್ತೊಂದು ಬದಿಗೆ ಶಾಲೆ, ಕಾಲೇಜುಗಳು ಮತ್ತು ಸಾರ್ವಜನಿಕ ಸರಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ಜನವಸತಿ ಪ್ರದೇಶ ಹಾಗೂ ರೈತರ ಹೊಲಗಳಿವೆ ಹಾಗಾಗಿ ರಾಷ್ಟ್ರೀಯ ಹೆದ್ದಾರಿ ದಾಟ ದಾಟುವುದು ಎಲ್ಲರಿಗೂ ಅನಿವಾರ್ಯವಾಗಿದೆ. 

ಆದ್ದರಿಂದ ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಂಜುನಾಥ್ ವಸ್ತ್ರದ ಹಾಗೂ ರೈತ ಮುಖಂಡರಾದ ಬಿ.ಎಸ್‌.ಗಾಣಿಗಿ, ಆನಂದ ನಂದಿ, ಉಪನ್ಯಾಶಕ ಡಾ.ಅಡಿವೆಪ್ಪ ಇಟಗಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರಲ್ಲಿ ವಿನಂತಿಸಿದರು. ಈ ಬಗ್ಗೆ ಪ್ರತಿಕ್ರಿಯೆಸಿದ ಜಗದೀಶ ಶೆಟ್ಟರ ಅತಿ ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರೀಶೀಲನೆ ಮಾಡುವದಾಗಿ ಹೇಳಿದರು.