ಬೆಂಗಳೂರು, ಜೂನ್ 08, ಧುತ್ತನೆ ಎದುರಾದ ಅನಾರೋಗ್ಯದ ಕಾರಣ ಅಕಾಲ ಮೃತ್ಯುವಿಗೀಡಾದ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, ನಗೆಮೊಗದ ಸರದಾರ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿದ್ದಾರೆ.ಬೆಂಗಳೂರು ದಕ್ಷಿಣ ತಾಲ್ಲೂಕಿನ ಕನಕಪುರ ರಸ್ತೆಯ ನೆಲಗುಳಿಯಲ್ಲಿ ಸಹೋದರ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅವರ ಅಂತ್ಯಕ್ರಿಯೆಗೆ ಸರ್ವಸಿದ್ಧತೆಯಾಗಿದ್ದು, ಬಸವನಗುಡಿಯ ನಿವಾಸದಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮುಖಾಂತರ ಸಾಗಿಸಲಾಗಿದೆ.ಕನ್ನಡ ಚಿತ್ರರಂಗದಲ್ಲಿ 11 ವರ್ಷಗಳಲ್ಲಿ 22 ಚಿತ್ರಗಳಲ್ಲಿ ನಟಿಸಿ, 39ನೆಯ ವಯಸ್ಸಿಗೇನೆ ಬದುಕಿಗೆ ವಿದಾಯ ಹೇಳಿರುವ ಚಿರು ಭೂ ತಾಯಿಯ ಮಡಿಲಲ್ಲಿ ಚಿರಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಪತಿಯನ್ನು ಕಳೆದುಕೊಂಡು ಕಂಗಾಲಾಗಿರುವ ಪತ್ನಿ ಮೇಘನಾರನ್ನು ಸಮಾಧಾನ ಪಡಿಸುವುದು ಹೇಗೆ ಎಂಬುದು ಎಲ್ಲರ ಚಿಂತೆಯಾಗಿದ್ದು, ಸಮಯವೇ ಆಕೆಗೆ ಸಮಾಧಾನ ಹೇಳಬೇಕಿದೆ. 6 ತಿಂಗಳ ಗರ್ಭಿಣಿಯಾಗಿರುವ ಮೇಘನಾ ಪತಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದವರು. ಚಿರಂಜೀವಿ ಸರ್ಜಾರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ವಿವಾಹವಾದ ಕೇವಲ ಎರಡೇ ವರ್ಷದಲ್ಲಿ ಕಳೆದುಕೊಂಡ ಅವರ ನೋವನ್ನು ನಿವಾರಿಸಲು ಯಾರಿಗೂ ಸಾಧ್ಯವಾಗದಾಗಿದೆ. ಚಿತ್ರರಂಗದ ಎಲ್ಲ ನಟ, ನಟಿಯರ ಜತೆಗೂ ಆತ್ಮೀಯತೆಯಿಂದ ಇದ್ದ ಚಿರಂಜೀವಿ, ಅಜಾತಶತ್ರು ಎಂದರೂ ತಪ್ಪಾಗದು.22 ಚಿತ್ರಗಳು ಸೂಪರ್ ಹಿಟ್ ಎಂದು ಹೇಳಲಾಗದಿದ್ದರೂ, ಜನರ ಮನರಂಜಿಸುವಲ್ಲಿ ಯಶಸ್ವಿಯಾದವು ಎಂದು ಖಂಡಿತ ಹೇಳಬಹುದು.ಹೆಸರು ಚಿರಂಜೀವಿಯಾದರೂ, ಕೇವಲ 39ನೆಯ ವಯಸ್ಸಿನಲ್ಲಿ ಜೀವನ ಪಯಣ ಮುಗಿಸಲು ಕ್ರೂರ ವಿಧಿಯೇ ಕಾರಣ ಎಂದು ಆತ್ಮೀಯರು, ವಿಧಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಾಲ್ಕು ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದ ಚಿರು, ಸರ್ಕಾರದ ಅನುಮತಿ ಸಿಗುತ್ತಿದ್ದಂತೆ ಶೂಟಿಂಗ್ ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು.ಲಾಕ್ ಡೌನ್ ವೇಳೆಯಲ್ಲಿ ಮನೆಯವರೊಂದಿಗೆ ನಗು ನಗುತ್ತ ಕಾಲ ಕಳೆದು, ಲಾಕ್ ಡೌನ್ ನಿರ್ಬಂಧ ಮುಗಿದ ಸಂದರ್ಭದಲ್ಲಿ ಬಹು ದೂರದ ಬಾರದ ಲೋಕಕ್ಕೇ ಪ್ರಯಾಣ ಬೆಳೆಸಿದ್ದಾರೆ. ಆದಾಗ್ಯೂ ತಮ್ಮ ಹೃದಯವಂತಿಕೆ, ಆತ್ಮೀಯತೆ ಹಾಗೂ ಚಲನಚಿತ್ರಗಳ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ಧಾರೆ.