ಫಝೌ, ನ.6: ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ನಂಬರ್ 1 ಆಟಗಾರ್ತಿ ಸೈನಾ 9-21, 12-21 ರಿಂದ ಚೀನಾದ ಕಾಯ್ ಯಾನ್ ಯಾನ್ ವಿರುದ್ಧ 24 ನಿಮಿಷದ ಕಾದಾಟದಲ್ಲಿ ಸೋಲು ಕಂಡರು. ಸೈನಾ ಹಾಗೂ ಕಾಯ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಪಂದ್ಯದ ಆರಂಭದಿಂದಲೂ ಸೈನಾ ಆಟವನ್ನು ಅರಿತು ಆಡಿದ ಎದುರಾಳಿ ಆಟಗಾರ್ತಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಅಲ್ಲದೆ ಪಂದ್ಯದ ಯಾವುದೇ ಹಂತದಲ್ಲೂ ಸುಲಭವಾಗಿ ಸೈನಾಗೆ ಅಂಕಗಳನ್ನು ನೀಡಲಿಲ್ಲ. ಪರಿಣಾಮ ಎರಡು ನೇರ ಗೇಮ್ ಗಳಲ್ಲಿ ಭಾರತೀಯ ಆಟಗಾರ್ತಿಯನ್ನು ಮಣಿಸಿದರು. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್ 21-14, 21-13 ರಿಂದ ಥಾಯ್ಲೆಂಡ್ ನ ಸಿತಿಕೋಮ್ ಥಮ್ಮಸಿನ್ ವಿರುದ್ಧ ಗೆಲುವಿನ ನಗೆ ಬೀರಿದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಆಘಾತ ಅನುಭವಿಸಿದೆ.