ಕೊರೊನಾ ಸಂಕಷ್ಟದ ನಡುವೆಯೇ ಚಿಲಿ ಆರೋಗ್ಯ ಸಚಿವರ ರಾಜೀನಾಮೆ

 ಸಾಂಟಿಯಾಗೋ, ಜೂನ್ 14,ಚಿಲಿ ಆರೋಗ್ಯ ಸಚಿವ ಜೈಮೆ ಮನಾಲಿಚ್ ನಾಗರಿಕ ಸಂಘಟನೆಯೊಂದರ ಟೀಕೆಯ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮನಾಲಿಚ್ ರಾಜೀನಾಮೆಯನ್ನು ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಸ್ವೀಕರಿಸಿದ್ದಾರೆ.  ಆರೋಗ್ಯ ಸಚಿವ ಡಾ. ಜೈಮೆ ಮನಾಲಿಚ್ ರಾಷ್ಟ್ರದ ಜನರ ಆರೋಗ್ಯ ಮತ್ತು ಪ್ರಾಣ ಕಾಪಾಡಲು ಕಷ್ಟಕರ ಸಂದರ್ಭದಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ವೈಯಕ್ತಿಕ ಆಸಕ್ತಿ ವಹಿಸಿ ಸಮಯ ಪರಿಶ್ರಮವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿರಿಸಿದ್ದರು ಎಂದು ಅಧ್ಯಕ್ಷರು  ಕೊಂಡಾಡಿದ್ದಾರೆ.ಕೊರೊನಾ ವೈರಾಣು ಸೋಂಕು ಬಿಕ್ಕಟ್ಟು ಇದೀಗ ಹೊಸ ಹಂತ ತಲುಪಿದ್ದು ಇದರ ಹೋರಾಟಕ್ಕೆ ಹೊಸ ನಾಯಕತ್ವದ ಅಗತ್ಯವಿದೆ ಎಂದು ಡಾ.ಜೈಮೆ ಹೇಳಿದ್ದಾರೆ.ಡಾ.ಜೈಮೆ ಅವರ ಆರೋಗ್ಯ ಬಿಕ್ಕಟ್ಟು ನಿರ್ವಹಣೆ ಬಗೆಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ನೂತನ ಸಚಿವರಾದ ವೈದ್ಯ, ಶಸ್ತ್ರಚಿಕಿತ್ಸಕ ಎನ್ರಿಕ್ಯೂ ಪ್ಯಾರಿಸ್, ಎಲ್ಲ ಆರೋಗ್ಯ ತಜ್ಞರು ಮತ್ತು ಇಡೀ ಆರೋಗ್ಯ ಸೇವಾ ತಜ್ಞ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.ನೂತನ ಸಚಿವರು ಕೊರೊನಾ ಬಿಕ್ಕಟ್ಟಿನ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಹಿಂದಿನ ಸರ್ಕಾರಗಳ ಆರೋಗ್ಯ ಸಚಿವಾಲಯಕ್ಕೆ ಸಲಹಾ ಸೂಚಕರಾಗಿದ್ದರು.ಚಿಲಿಯಲ್ಲಿ ಶನಿವಾರದ ವೇಳೆಗೆ 1,67,355 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು 3,101 ಜನರು ಮೃತಪಟ್ಟಿದ್ದಾರೆ.