ಮಕ್ಕಳೇ ನೀರಿನ ಆಕರ್ಷಣೆಗೆ ಬಲಿಯಾಗದಿರಿ:
ಹಾರೂಗೇರಿ, 04 : ಕೃಷಿಹೊಂಡದ ನೀರಿನಲ್ಲಿ ಮುಳುಗಿ ಮೃತಪಡುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಜಲ ದುರಂತಗಳು ಅದಕ್ಕೆ ಪುಷ್ಠಿ ನೀಡುವಂತಿದೆ. ಬೇಸಿಗೆ ರಣ ಬಿಸಿಲಿನ ಜೊತೆ ರಜೆಯ ಮೋಜು ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ.
ರಾಜ್ಯದಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಕೃಷಿಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇ.80ಕ್ಕಿಂತ ಅಧಿಕ ಕೃಷಿಹೊಂಡಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸರ್ಕಾರಿ ದಾಖಲೆಗಳೇ ಹೇಳುತ್ತವೆ. ರಾಜ್ಯಾದ್ಯಂತ ಸಾವು-ನೋವು, ಅವಘಡಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ದುರ್ದೈವದ ಸಂಗತಿ.
ಬೇಸಿಗೆ ಧಗೆ ಹೆಚ್ಚುತ್ತಿದ್ದು, ಮಕ್ಕಳನ್ನು ಕರೆದುಕೊಂಡು, ಸ್ನಾನಕ್ಕೆಂದು ಕೃಷಿಹೊಂಡದತ್ತ ಮುಖ ಮಾಡುವ ಯುವಕರು, ಪಾಲಕರು ಎಚ್ಚರದಿಂದಿರಬೇಕು. ಬೇಸಿಗೆಯ ಬೇಗೆ ತಣಿಸಿಕೊಳ್ಳಲು ಸ್ನಾನಕ್ಕೆಂದು ಸುತ್ತಮುತ್ತಲಿನ ಜಮೀನುಗಳಲ್ಲಿರುವ ಕೃಷಿಹೊಂಡಗಳಲ್ಲಿ ಸ್ನಾನ ಮಾಡುವಾಗ ಅನೇಕ ಮಕ್ಕಳು, ಯುವಕರು ಜೀವ ಕಳೆದುಕೊಂಡ ಪ್ರಕರಣಗಳು ಇತ್ತೀಚೆಗೆ ರಾಜ್ಯಾದ್ಯಂತ ವರದಿಯಾಗುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎನ್ನುವ ಸಲಹೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತಗೊಳ್ಳುತ್ತಿವೆ.
ಶಾಲಾ ಮಕ್ಕಳ ಪರೀಕ್ಷೆಗಳು ಮುಗಿದಿದ್ದು, ತಂಡೋಪತಂಡವಾಗಿ ಮಕ್ಕಳು ಹಾಗೂ ಯುವಕರ ಗುಂಪು ಕೃಷಿಹೊಂಡ, ಬಾವಿ, ನದಿಗಳತ್ತ ತೆರಳುತ್ತಿವೆ. ಮೋಜು ಮಸ್ತಿಯ ಗುಂಗಿನಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ದುರಂತ. ಈಜು ಬಲ್ಲವರಾಗಿದ್ದರೂ ಕೃಷಿಹೊಂಡದಲ್ಲಿ ಜೀವ ಕಳೆದುಕೊಂಡ ಅದೆಷ್ಟೋ ಪ್ರಕರಣಗಳು ಕಣ್ಣ ಮುಂದಿವೆ. ರಜೆಯ ಮಜಾ ಮಾಡುವ ಉತ್ಸಾಹದ ಬರದಲ್ಲಿ ನೀರಿನ ಆಕರ್ಷಣೆಗೆ ಮಕ್ಕಳು ಹಾಗೂ ಯುವಕರು ಬಲಿಯಾಗುತ್ತಿರುವುದು ದುರಂತ.
ನೀರಿನ ಕೊರತೆ ನೀಗಿಸಲು ಕೃಷಿಹೊಂಡ ನಿರ್ಮಾಣ : ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರ ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಮತ್ತಿತರ ಯೋಜನೆಗಳಡಿ ಕೃಷಿಹೊಂಡ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿದೆ. ರೈತರು ಕೃಷಿಹೊಂಡ ನಿರ್ಮಾಣ ಮಾಡಿ ಮಳೆಗಾಲದಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಬರಗಾಲ ಅಥವಾ ಬೇಸಿಗೆ ಕಾಲದಲ್ಲಿ ಹೊಂಡದಲ್ಲಿ ಲಭ್ಯವಿರುವ ಅಲ್ಪ ನೀರನ್ನೇ ಹನಿ ನೀರಾವರಿ ಮೂಲಕ ತೋಟಗಾರಿಕೆ ಬೆಳೆಗಳಿಗೆ ಬಳಸುವ ಮೂಲಕ ನೀರಿನ ಕೊರತೆ ನೀಗಿಸಿಕೊಳ್ಳಲು ಜಮೀನುಗಳಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಮಣ್ಣಿನ ಜಿಗಿ ಬಿಗಿ : ನೀರು ಸೋರಿಕೆಯಾಗದಂತೆ ಕೃಷಿಹೊಂಡಕ್ಕೆ ಪಾಲಿಥಿನ್ ಹೊದಿಕೆಯನ್ನು ಹಾಕಲಾಗಿರುತ್ತದೆ. ಹೊಂಡಕ್ಕೆ ನೀರು ತುಂಬಿಸುವಾಗ ಮಣ್ಣು ಮತ್ತು ಗಾಳಿಯಿಂದ ಧೂಳು ಹೊಂಡದಲ್ಲಿ ಶೇಖರಣೆಗೊಳ್ಳುತ್ತದೆ. ಆ ಮಣ್ಣು ಪಾಲಿಥಿನ್ ಹೊದಿಕೆ ಮೇಲೆ ಯಥೆಚ್ಛೆವಾಗಿ ಸಂಗ್ರಹಗೊಂಡು ಜಿಗಿಯಾಗಿರುತ್ತದೆ. ಅಲ್ಲದೇ ಅದರ ಮೇಲೆ ಪಾಚಿ ಬೆಳೆದಿರುವುದರಿಂದ ನೀರಿಗಿಳಿದಾಗ ಕಾಲನ್ನು ಮೇಲಕ್ಕೇಳದಷ್ಟು ಬಿಗಿಯಾಗಿ ಹಿಡಿದಿಡುತ್ತದೆ. ಇದರಿಂದ ಮೇಲೇಳಲಾಗದೇ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
ಪಾಲನೆಯಾಗದ ನಿಯಮ : ಆಕಸ್ಮಿಕ ಅವಘಡಗಳನ್ನು ತಪ್ಪಿಸಲು ಕೃಷಿಹೊಂಡದ ಸುತ್ತಲೂ ತಂತಿ ಬೇಲಿ ಹಾಗೂ ಹೊಂಡದ ಸುತ್ತಲೂ ನೆರಳು ಪರದೆ ಅಳವಡಿಸುವುದು ಕಡ್ಡಾಯ. ಈ ಬಗ್ಗೆ ರೈತಸಂಪರ್ಕ ಕೇಂದ್ರ ತಂತ್ರಾಂಶದಲ್ಲಿ ನಮೂದಿಸಿರಬೇಕು. ಸುರಕ್ಷತಾ ಕ್ರಮವಾಗಿ ಸೂಚನಾ ಫಲಕ ಅಳವಡಿಸುವುದಲ್ಲದೇ ಹೊಂಡಗಳಲ್ಲಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ತಪ್ಪದೇ ಇಳಿಬಿಡಬೇಕು. ಭೂ ಮಾಲೀಕರನ್ನು ಬಿಟ್ಟರೆ ಮಕ್ಕಳು ಹಾಗೂ ವೃದ್ಧರಿಗೆ ಪ್ರವೇಶ ನಿರ್ಬಂಧಿಸಬೇಕು. ಕೃಷಿಹೊಂಡದಲ್ಲಿ ಈಜಾಡುವುದು, ಜಾನುವಾರುಗಳಿಗೆ ನೀರು ಕುಡಿಸುವುದು, ಬಟ್ಟೆ, ಪಾತ್ರೆ ತೊಳೆಯುವುದು ಮತ್ತಿತರ ಕೃಷಿಯೇತರ ಚಟುವಟಿಕೆಗಳನ್ನು ಮಾಡಲೇಬಾರದು.
ನದಿಗಳೂ ಡೆಂಜರ : ಬೇಸಿಗೆಯಾದ್ದರಿಂದ ಬಹುತೇಕ ನದಿಗಳ ನೀರಿನ ಮಟ್ಟ ಕುಸಿದಿರುತ್ತದೆ. ನೀರಿನ ಹರಿವು ಕ್ಷೀಣಿಸಿದ ಸಂದರ್ಭ ನಿಂತ ನೀರು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಸಮತಟ್ಟು ಜಾಗಗಳಲ್ಲಿ ಮುಂದೆ ಹರಿಯದ ನೀರು, ಹಾಗೆಯೇ ನಿಂತು ಕೆಸರುಮಯವಾದ ಪರಿಣಾಮ ಆಳವಾದ ಗುಂಡಿಗಳು ಪ್ರಾಣ ಬಲಿ ಪಡೆಯುತ್ತವೆ. ಆದ್ದರಿಂದ ನದಿಯತ್ತ ಮುಖ ಮಾಡುವ ಯುವಕರ ದಂಡಿಗೆ ನಿರ್ಬಂಧ ವಿಧಿಸಬೇಕು ಎನ್ನುವ ಸಲಹೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಆದರೆ ಇದು ಅಸಾಧ್ಯವಾಗಿದ್ದು, ಯುವಕರು, ಮಕ್ಕಳು ಮೈಮರೆಯದೆ ಸ್ವಯಂ ಜಾಗ್ರತೆ ವಹಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವಂತೆ ಪ್ರಜ್ಞಾವಂತರು ಮನವಿ ಮಾಡಿದ್ದಾರೆ.
ಪೋಷಕರೇ ಎಚ್ಚರ ! : ಶಾಲಾ-ಕಾಲೇಜುಗಳಿಗೆ ರಜೆ ಸಮಯವಾದ್ದರಿಂದ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯ. ಕೃಷಿಹೊಂಡ, ಬಾವಿ, ಕೊಳ್ಳ, ನದಿಯತ್ತ ಮಕ್ಕಳನ್ನು ಕರೆದುಕೊಂಡು ಹೋಗುವವರು ಜವಾಬ್ದಾರಿಯುತವಾಗಿ ಜಾಗೃತೆ ವಹಿಸಿ ನೀರಿಗಿಳಿಯಬೇಕು. ಅಪಾಯಕಾರಿ ಸ್ಥಳಗಳಿಗೆ ತೆರಳದಿರುವುದೇ ಸೂಕ್ತ. ಬಿಸಿಲ ಧಗೆಗೆ ನೀರು ಕಂಡಲ್ಲಿ ಸ್ನಾನಕ್ಕೆ ಇಳಿಯುವುದು ಜೀವದ ಜತೆ ಚೆಲ್ಲಾಟವಾಡಿದಂತೆ.
(ಕೃಷಿಭಾಗ್ಯ ಯೋಜನೆಯಡಿ ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಲಾದ ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ರೈತರು ಇಲಾಖಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. - ವಿನೋದ ಮಾವರಕರ, ಸಹಾಯಕ ಕೃಷಿ ಅಧಿಕಾರಿ ರಾಯಬಾಗ)
(ಬೇಸಿಗೆಯಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಹಿ ಮಹೇಶ ಐಹೊಳೆ. ಸಾಮಾಜಿಕ ಹೋರಾಟಗಾರರು