ಶಿವಮೊಗ್ಗ, ಆ 13 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಹ ಸಂತ್ರಸ್ತರ ಭೇಟಿಯನ್ನು ಮುಂದುವರಿಸಿದ್ದು, ಇಂದು ಸ್ವ ಕ್ಷೇತ್ರವಾದ ಶಿವಮೊಗ್ಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಇಂದು ಬೆಳಗ್ಗೆ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯಲ್ಲಿ ಮಳೆಗೆ ಮೂವರು ಸಾವನ್ನಪ್ಪಿದರೆ, 556 ಗ್ರಾಮಗಳು ಮುಳುಗಿವೆ. ಈಗಾಗಲೇ ಸಾವಿರಾರು ಮಂದಿ ಗಂಜಿ ಕೇಂದ್ರ ಆಶ್ರಯ ಪಡೆದಿದ್ದು, ಶಿವಮೊಗ್ಗ ನಗದಲ್ಲಿಯೇ 5 ಸಂತ್ರಸ್ತ ಕೇಂದ್ರಗಳನ್ನು ತೆರೆಯಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಬಳಿಕ ಕಳೆದ ರಾತ್ರಿ ಅವರು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಇಂದು ಬೆಳಗ್ಗೆ ಹಾನಿಗಳೊಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಹೆಗಲತ್ತಿ ಗ್ರಾಮದಲ್ಲಿ ಸುಮಾರು 7 ಕಿ ಮೀ ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಅಪಾರ ಹಾನಿಯಾಗಿದೆ. ಮುಖ್ಯಮಂತ್ರಿ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಒಂದು ನಿಮಿಷ ಬಂದು ಹೋಗಿದ್ದಾರೆ, ಇದರಿಂದ ಯಾರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಬಳಿಕ ಶಿಕಾರಿಪುರಕ್ಕೆ ತೆರಳಲಿರುವ ಅವರು, ಅಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ, ನಂತರ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ನಂತರ ಸೊರಬ, ಸಾಗರ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಿಕ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಸತ್ ಸದಸ್ಯರು, ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ.