ವಿಧಾನಸೌಧದಲ್ಲಿ ಬಜೆಟ್ ಪೂರ್ವ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಫೆ.10:   ಮಾರ್ಚ್   5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ 2020  ಅವಧಿಯ ಮೊದಲ ಬಜೆಟ್ ಮಂಡಿಸಲಿರುವ  ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಆಯವ್ಯಯ ಲೆಕ್ಕಾಚಾರ  ಹಾಕಿದರು.

 ಕಳೆದ ಜೂನ್​ 26 ರಂದು  ಯಡಿಯೂರಪ್ಪ ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ  ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಾತ್ಕಾಲಿಕ ಹಣಕಾಸು ವಿಧೇಯಕಕ್ಕೆ ಸದನ ಅನುಮತಿ  ನೀಡಿತ್ತು. ಈ  ವರ್ಷ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸುವ ಅನಿವಾರ್ಯತೆ ಇರುವುದರಿಂದ  ಬಜೆಟ್ ಮಂಡನೆಗೆ ಅವಶ್ಯಕವಾದ ಎಲ್ಲಾ ಸಿದ್ಧತೆಗಳನ್ನು ನಡೆಸುವುದಕ್ಕಾಗಿ  ಸೋಮವಾರ  ವಿಧಾನಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರ ಸಭೆ ನಡೆಸಿದರು.

ಈ  ಸಭೆಯಲ್ಲಿ  ವಾಣಿಜ್ಯ, ಸಾರಿಗೆ, ಅಬಕಾರಿ, ಭೂ ಮಾರುಕಟ್ಟೆಯ ಸಂಘ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ರಾಜ್ಯ  ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್   ಟೀಕಿಸುತ್ತಿದ್ದು, ವಿಪಕ್ಷಗಳ ಟೀಕೆಗೆ ಗುರಿಯಾಗದಂತೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು  ಹಣ ಹೊಂದಿಸಬೇಕಿದೆ.

ಈ ಬಾರಿ  ರಾಜ್ಯದಲ್ಲಿ 76,660 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು ಈ ಪೈಕಿ 55,984 ಕೋಟಿ ಸಾಧನೆ ಮಾಡಲಾಗಿದೆ.

ಜಿಎಸ್‌ಟಿ  ತೆರಿಗೆ ಸಂಗ್ರಹದಲ್ಲಿ  61,245 ಕೋಟಿ ಹಣ ಸಂಗ್ರಹಿಸಲಾಗಿದೆ. 22,950 ಕೋಟಿ ಅಬಕಾರಿ  ರಾಜಸ್ವ ಸಂಗ್ರಹ ಗುರಿ ಹೊಂದಲಾಗಿತ್ತು. ಈ ಪೈಕಿ 16,187 ಕೋಟಿ ಹಣ ಸಂಗ್ರಹಿಸಲಾಗಿದೆ.  ಅಬಕಾರಿ ಇಲಾಖೆಯಲ್ಲಿನ ತೆರಿಗೆ ಸಂಗ್ರಹದಲ್ಲಿ ಶೇ. 77.23 ರಷ್ಟು ಅಭಿವೃದ್ಧಿ  ಸಾಧಿಸಲಾಗಿದೆ.

ಇನ್ನು ಸಾರಿಗೆ ಇಲಾಖೆಯಿಂದ ಒಟ್ಟು 7100 ಕೋಟಿ ತೆರಿಗೆ ಸಂಗ್ರಹಕ್ಕೆ  ಒತ್ತು ನೀಡಲಾಗಿದೆ.ವಾಹನ ಮಾರಾಟ ಕುಸಿತದಿಂದ 460.20 ಕೋಟಿ ಕೊರತೆಯಾಗಿದೆ  ಎನ್ನಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ಹೊಂದಲಾಗಿದೆ

ಜಿಎಸ್​ಟಿ ತೆರಿಗೆ ವಂಚನೆ ಬಗ್ಗೆ ಹೆಚ್ಚಿನ ಗಮನ ಕೊಟ್ಟು,  ತೆರಿಗೆ ಸಂಗ್ರಹ ಮಾಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಚಿಲ್ಲರೆ  ಮದ್ಯ ಮಾರಾಟ ಹಾಗೂ ಮದ್ಯ ಉತ್ಪಾದನಾ ಘಟಕಗಳ ಪರವಾನಿಗೆ ಆನ್‍ಲೈನ್ ಮೂಲಕ ನವೀಕರಣಕ್ಕೆ  ಒತ್ತು ನೀಡುವ ಬಗ್ಗೆ ಯಡಿಯೂರಪ್ಪ ಸಭೆಯಲ್ಲಿ ಚರ್ಚಿಸಿದ್ದು, ಖಜಾನೆಗೆ ಹೆಚ್ಚು  ಆದಾಯನೀಡಬಲ್ಲ ಇಲಾಖೆಗಳಿಗೆ ಹೆಚ್ಚು ನೀಡಲು ಸೂಚಿಸಲಾಗಿದೆ.