ಬೆಂಗಳೂರು, ಆ 20 ದಿವಂಗತ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಸಮಾನತೆಯ ಹರಿಕಾರ ದೇವರಾಜ್ ಅರಸು ಅವರ ಜಯಂತಿ ಅಂಗವಾಗಿ ಅವರ ಪುತ್ಥಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ. ಹಿಂದುಳಿದ ವರ್ಗಗಳ ಪರವಾಗಿ ಕಾಳಜಿ ಹೊಂದಿದ್ದ ಅವರು, ಸಮಾಜಕ್ಕೆ ಮಾಡಿರುವ ಕಾರ್ಯಗಳು ಅಚ್ಚಳಿಯದೆ ಉಳಿದಿವೆ. ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ , ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅವರು ಈ ನಾಡಿಗೆ ಕೊಟ್ಟಂತಹ ಸೇವೆ, ಜಾರಿಗೆ ತಂದ ಕಾರ್ಯಕ್ರಮ ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.