ನವದೆಹಲಿ, ಸೆ 18 ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಹಿಂದಿ ಭಾಷೆ ದೇಶಾದ್ಯಂತ ಪ್ರವರ್ಧಮಾನದಲ್ಲಿರುತ್ತದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು, ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಖಂಡಿಸಿದ್ದು, ಹಿಂದಿ ಹೇರಿಕೆ ವಿರುದ್ಧ ಸೆಪ್ಟೆಂಬರ್ 20ರಂದು ಡಿಎಂಕೆ ಕರೆ ನೀಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಪಿ ಚಿದಂಬರಂ, ದೇಶದ ಜನರನ್ನು ಒಗ್ಗೂಡಿಸಲು ಹಿಂದಿ ಭಾಷೆಯಿಂದ ಮಾತ್ರ ಸಾಧ್ಯ ಎಂಬುದು ಮೂರ್ಖತನ. ತಮಿಳು ಭಾಷಿಗರು ಮಾತ್ರವಲ್ಲದೆ ಯಾವುದೇ ಭಾಷೆ ಮಾತನಾಡುವ ಜನರು ಹಿಂದಿ ಹೇರಿಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ದೇಶದ ಎಲ್ಲ ಭಾಷೆಗಳ ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ಹಿಂದಿ ಭಾಷೆಯೊಂದೇ ಜನರನ್ನು ಒಗ್ಗೂಡಿಸಲು ಸಾಧ್ಯ ಎಂಬ ಮಾತನ್ನು ಒಪ್ಪುವುದಿಲ್ಲ ಎಂದು ಮತ್ತೊಂದು ಟ್ವೀಟ್ ನಲ್ಲಿ ಚಿದಂಬರಂ ತಿಳಿಸಿದ್ದಾರೆ.
ಹಿಂದಿ ಹೇರಿಕೆ ವಿರೋಧಿಸಿ ಸೆ. 20ರಂದು ಡಿಎಂಕೆ ಕರೆ ನೀಡಿರುವ ಪ್ರತಿಭಟನೆಯಲ್ಲಿ ಎಲ್ಲ ಕಾರ್ಯಕರ್ತರೂ ಪಾಲ್ಗೊಳ್ಳುವಂತೆ ಸೂಚನೆ ನೀಡುವಂತೆ ಟಿಎನ್ ಸಿಸಿ ಅಧ್ಯಕ್ಷ ಕೆ ಎಸ್ ಅಳಗಿರಿಯವರಿಗೆ ಚಿದಂಬರಂ ಸಲಹೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಭಾಷೆ ಹಿಂದಿಯು 2024ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಪ್ರವರ್ಧಮಾನಕ್ಕೆ ಬರಲಿದೆ ಎಂದು ಹೇಳಿಕೆ ನೀಡಿದ್ದರು.
ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನ್ಯಾಯಾಂಗ, ಔಷಧ, ವೈದ್ಯಕೀಯ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹಿಂದಿ ಅಳವಡಿಕೆಗೆ ಸರ್ಕಾರ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದರು.