ಕಾಮಗಾರಿಗಳ ವಸ್ತುಸ್ಥಿತಿ ಪರೀಶೀಲಿಸಿ: ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ

Check the status of the works: In-charge Secretary Sushma Godabole

ಕಾಮಗಾರಿಗಳ ವಸ್ತುಸ್ಥಿತಿ ಪರೀಶೀಲಿಸಿ:  ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ 

ಕಾರವಾರ, ಮಾ.27 :- ಎಲ್ಲಾ ಆಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿಗಳ ಬಗ್ಗೆ ಖುದ್ದು ಭೇಟಿ ನಿಡಿ ಪರೀಶೀಲನೆ ನಡೆಸಬೇಕು, ಕಾಮಗಾರಿಗಳಿಗೆ ನೀಡಿರುವ  ಅನುದಾನದಲ್ಲಿ  ಶೇ.100 ಆರ್ಥಿಕ ಪ್ರಗತಿ ಸಾಧಿಸುವುದು ಮಾತ್ರವಲ್ಲ ಕಾಮಗಾರಿ ಗುಣಮಟ್ಟ ಕೂಡಾ 100ಅ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ನ ಆಡಳಿತಾಧಿಕಾರಿ ಸುಷಮಾ ಗೋಡಬೋಲೆ ಸೂಚನೆ ನೀಡಿದರು. 

ಅವರು ಗುರುವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ನಡೆದ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಎಲ್ಲಾ ಸರಕಾರಿ ಕಾಮಗಾರಿಗಳಲ್ಲಿ ಶೇ.100 ರಷ್ಟು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ಸಂದರ್ಭದಲ್ಲಿ ಆಗಾಗ್ಗೆ ಭೇಟಿ ನೀಡಿ ಪರೀಶೀಲನೆ ನಡೆಸುವುದರ ಮೂಲಕ  ಸರ್ಕಾರದ ಅನುದಾನದ ಸಮರ​‍್ಕ ಬಳಕೆ ಆಗುವಂತೆ ಎಚ್ಚರವಹಿಸಬೇಕು ಎಂದರು. 

ಜಿಲ್ಲೆಯಲ್ಲಿ ತೀವ್ರ ಮತ್ತು ಮಧ್ಯಮ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪೂರಕ ಆಹಾರ ಒದಗಿಸಿ ಅವರನ್ನು ಆರೋಗ್ಯವಂತರನ್ನಾಗಿಸಬೇಕು. ಕಳೆದ ಬಾರಿಯಂತೆ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು  ಕೈಗೊಳ್ಳುವಂತೆ ಹಾಗೂ  ಆಯುಷ್ಮಾನ್ ಆರೋಗ್ಯ ಕಾರ್ಡ್‌ನ ಪ್ರಯೋಜನ ಜಿಲ್ಲೆಯಲ್ಲಿನ ಅರ್ಹ ಪ್ರತಿಯೊಬ್ಬರಿಗೂ ದೊರೆಯಬೇಕು ಆದ್ದರಿಂದ ಈ ಬಗ್ಗೆ ವಿಶೇಷ ಆಭಿಯಾನ ಕೈಗೊಂಡು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಬೇಕು. ದಾಂಡೇಲಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದ ಕುರಿತಂತೆ ಪ್ರಸ್ತಾವನೆಯನ್ನು ಮತ್ತು ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ತಮಗೆ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.  

ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಶೇ. 99.78 ಪ್ರಗತಿಯಾಗಿದ್ದು, ಬಾಕಿರುವ 692 ಮಂದಿಯನ್ನು ಯೋಜನೆಗೆ ಸೇರೆ​‍್ಡಗೊಳಿಸಿ ನೂರು ಶೇಕಡಾ ಪ್ರಗತಿ ಸಾಧಿಸಬೇಕು, ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸುವ ನಿಟ್ಟಿನಲ್ಲಿ ನಿವೇಶನಗಳನ್ನು ಗುರುತಿಸುವ ಕಾರ್ಯವನ್ನು ಆದ್ಯತೆಯಲ್ಲಿ ಕೈಗೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. 

ಯಲ್ಲಾಪುರ ತಾಲೂಕಿನ  ಮಂಚಿಕೇರಿಯಲ್ಲಿ ನೂತನ ಬಿಸಿಎಂ ಹಾಸ್ಟೆಲ್ ನಿರ್ಮಾಣ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಅಭಿವೃಧ್ದಿ ಇಲಾಖೆ ಅಧಿಕಾರಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿನ ಯಾವುದೇ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು.  ಹಾಸ್ಟೆಲ್‌ಗಳನ್ನು ನಿರ್ವಹಿಸುವ ಇಲಾಖೆಗಳ ಅಧಿಕಾರಿಗಳು, ತಮ್ಮ ಹಂತದಲ್ಲಿಯೇ ಅಂತರ್ ಇಲಾಖಾ ಹಾಸ್ಟೆಲ್‌ಗಳ ಪರೀಶೀಲನೆ ಕೈಗೊಂಡು ಹೆಚ್ಚಿನ ಸುಧಾರಣೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು. 

  ಜಿಲ್ಲೆಯಲ್ಲಿ ಕ್ರೀಡೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಹೊರಾಂಗಣ ಕ್ರೀಡಾಂಗಣಗಳು ಇಲ್ಲದ ಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣಗಳನ್ನು ತೆರೆಯಲು ಆದ್ಯತೆ ನೀಡಬೇಕು. ಕ್ರೀಡಾಂಗಣಗಳಲ್ಲಿ ಸಾಧಕ ಕ್ರೀಡಾಪಟುಗಳ ಬಗ್ಗೆ ಮತ್ತು ಕ್ರೀಡಾ ಆರೋಗ್ಯದ ಕುರಿತು ಪುಸ್ತಕಗಳನ್ನು ಕ್ರೀಡಾಪಟುಗಳಿಗೆ ಒದಗಿಸಬೇಕು, ಕ್ರೀಡಾಂಗಣಗಳ ಅಭಿವೃಧ್ದಿಗೆ ಜಿಲ್ಲೆಯಲ್ಲಿನ ವಿವಿಧ ಉದ್ದಿಮೆಗಳಲ್ಲಿರುವ ಸಾಮಾಜಿಕ ಹೊಣೆಗಾರಿಕಾ ನಿಧಿಯನ್ನು ಬಳಸಿಕೊಳ್ಳುವಂತೆ ತಿಳಿಸಿದರು. 

        ಇಲಾಖೆಗಳಲ್ಲಿ  ಫಲಾನುಭವಿಗಳಿಗೆ ವಿವಿಧ ತರಬೇತಿ ನೀಡುವುದು ಮಾತ್ರವಲ್ಲದೇ ಅವರು ಆರ್ಥಿಕವಾಗಿ ಸ್ವಾವಲಂಬನೆ ಆಗುವ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡಬೇಕು, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ಕ್ಷೇತ್ರವನ್ನು ವಿಸ್ತರಣೆ ಮಾಡಬೇಕು, ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.   

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 


ಚಿತ್ರ ಶೀರ್ಷಿಕೆ: ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರೀಶೀಲನೆ ಸಭೆಯು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು. 

ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ , ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.