ಚೆನ್ನೈ, ಸೆ 06: ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಇಸ್ರೋ ಸಾಹಸವನ್ನು ನೋಡಲು ಇಡೀ ದೇಶ ಕಾತರದಿಂದ ಕಾಯುತ್ತಿದ್ದಾರೆ ಈ ನಡುವೆ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ನಾಮ್ಳೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯುವಂತೆ ತಮಿಳುನಾಡಿನ ತಿಂಗಳೂರು ಚಂದ್ರನ್ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಲಾಗಿದೆ ಕೈಲಾಸನಾಥ ದೇವಾಲಯ ಅಥವಾ ಚಂದ್ರ ದೇವಾಲಯದ ವ್ಯವಸ್ಥಾಪಕ ವಿ ಕಣ್ಣನ್ ಈ ವಿಷಯ ತಿಳಿಸಿದ್ದು, ಚಂದ್ರನ ಕೃಪೆಗಾಗಿ, ಶುಕ್ರವಾರ ಸಂಜೆ ವಿಶೇಷ ಅಭಿಷೇಕ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಶುಕ್ರವಾರ ತಡರಾತ್ರಿ 1.30ರಿಂದ 2.30ರ ವೇಳೆಗೆ ಭೂಮಿಯಿಂದ ಕಾಣಿಸದ ಚಂದ್ರನ ಮತ್ತೊಂದು ಭಾಗದ ಮೇಲೆ ಇಳಿಯುವ ಸಾಹಸವನ್ನು ವಿಕ್ರಮ್ ನಡೆಸಲಿದೆ. ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನಲ್ಲಿ ಹುದುಗಿರುವ ರಹಸ್ಯಗಳನ್ನು ವಿಕ್ರಮ್ ಬೇಧಿಸಲಿದೆ. ಜುಲೈ 22ರಂದು ಚಂದ್ರಯಾನ-2 ಉಡಾವಣೆಯ ಸಂದರ್ಭದಲ್ಲೂ ವಿಶೇಷ ಪೂಜೆ ಸಲ್ಲಿಸಿ ಅಕ್ಕಿ ಹಾಗೂ ಬೆಲ್ಲದಿಂದ ಮಾಡಿದ ಪ್ರಸಾದ ವಿತರಣೆ ಮಾಡಲಾಗಿತ್ತು. ಸತತ 48 ದಿನಗಳ 3.44 ಲಕ್ಷ ಕಿಮೀ ಪ್ರಯಾಣ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲಾಗಿತ್ತು. ಇಂದು ತಡರಾತ್ರಿ 1.30ರಿಂದ ಲ್ಯಾಂಡರ್ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 15 ನಿಮಿಷಗಳಲ್ಲಿ ಮುಗಿಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ತೆರೆದುಕೊಂಡು ಪ್ರಜ್ಞಾನ್ ಹೆಸರಿನ ರೋವರ್ ಹೊರಬರಲಿದೆ.