ಖ್ಯಾತ ಸಾಹಿತಿ ಚಂದ್ರಕಾಂತ ಕುಸನೂರ ನಿಧನ

ಬೆಳಗಾವಿ, ಏ.19,ಕನ್ನಡದ ಖ್ಯಾತ ಸಾಹಿತಿ ಚಂದ್ರಕಾಂತ ಕುಸನೂರ ಅವರು ಕಳೆದ ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90  ವರ್ಷ ವಯಸ್ಸಾಗಿತ್ತು.ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.ಚಂದ್ರಕಾಂತ  ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.1931ರಲ್ಲಿ  ಕಲಬುರ್ಗಿಯ ಕುಸನೂರಲ್ಲಿ ಜನಿಸಿದ್ದ ಅವರು, ಎಂ.ಎ; ಬಿ.ಇಡಿ ಪದವಿಗಳನ್ನು  ಪಡೆದಿದ್ದರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ  ಅಧ್ಯಾಪಕರಾಗಿದ್ದ ಅವರು, ಕಲಬುರ್ಗಿಯಲ್ಲಿ "ರಂಗ ಮಾಧ್ಯಮ"ಎಂಬ ನಾಟಕ ಸಂಸ್ಥೆಯ  ಸ್ಥಾಪಿಸಿದ್ದರು ಮಾತ್ರವಲ್ಲ, ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದ ಖ್ಯಾತಿ ಇವರದ್ದಾಗಿದೆ.1975ರಲ್ಲಿ  “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 2006ನೆಯ  ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
ವಿದೂಷಕ’,  ‘ಆನಿ ಬಂತಾನಿ’, ‘ದಿಂಡಿ’ಯಂಥ ಅಸಂಗತ ನಾಟಕಗಳಿಂದ; ‘ಯಾತನಾ ಶಿಬಿರ’, ‘ಚರ್ಚ್‌ಗೇಟ್‌’,  ‘ಗೋಹರಜಾನ್‌’, ‘ಮಾಲತಿ ಮತ್ತು ನಾನು’ ಇತ್ಯಾದಿ  ಕಾದಂಬರಿಗಳಿಂದ;  ಸಣ್ಣ ಕತೆಗಳಿಂದ;  ಅನುವಾದಗಳಿಂದ ಸಹೃದಯರಲ್ಲಿ ಸ್ಥಾನ ಪಡೆದಿರುವ ಚಂದ್ರಕಾಂತ ಕುಸನೂರ ಅವರು ಒಳ್ಳೆಯ  ಚಿತ್ರಕಲಾವಿದರೂ ಆಗಿದ್ದರು.ಕುಸನೂರ ಅವರು ಆರಂಭದಲ್ಲಿ ಕಡಿಮೆ ಕಾವ್ಯ ಪಂಕ್ತಿಯ ಜಪಾನಿನ ಹೈಕುವಿನಂಥ ರೂಪದಲ್ಲಿ ಪ್ರಯೋಗ ಮಾಡಿ ಕನ್ನಡಕ್ಕೆ ಹೈಕುಗಳನ್ನು ಪರಿಚಯಿಸಿದರು. ಕುಸನೂರ ಅವರ ನಿಧನಕ್ಕೆ ಅನೇಕ ಸಾಹಿತಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.