ಬೆಂಗಳೂರು, ಮೇ 30,ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ, ತಮ್ಮ ದಿಟ್ಟ ನಿರ್ಧಾರ, ರಾಜಕೀಯ ಇಚ್ಛಾಶಕ್ತಿಯ ಪರಿಣಾಮ ನರೇಂದ್ರ ಮೋದಿ ಅವರು ವಿಶ್ವದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂತಹ ದೂರ ದೃಷ್ಟಿಯ ಪ್ರಧಾನಿಯವರನ್ನು ಹೊಂದಿರುವುದು ಭಾರತೀಯರಿಗೆ ನಿಜಕ್ಕೂ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದ್ದಾರೆ.ಮಾತ್ರವಲ್ಲ ಮೋದಿ ಭಾರತದ ರಾಜಕಾರಣದ ಯುಗ ಪ್ರವರ್ತಕ ಎಂಬ ತಲೆಬರಹದಲ್ಲಿ ಲೇಖನವೊಂದನ್ನು ಮುಖ್ಯಮಂತ್ರಿ ಬರೆದಿದ್ದಾರೆ.ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯ ಕೂಡ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ.
ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ವರ್ಷದ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಗಡಿ ಭಾಗದ ಕಿರಿಕಿರಿಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಎರಡನೇ ಆಡಳಿತಾವಧಿಯ ಕೇವಲ ಒಂದೇ ಒಂದು ವರ್ಷದಲ್ಲಿ ಭಾರತವನ್ನು ದಶಕದಶಕಗಳಿಂದ ಕಾಡುತ್ತಿದ್ದ ಅನೇಕ ಗಂಭೀರ ಸಮಸ್ಯೆಗಳಿಗೆ ಯಶಸ್ವಿ ಹಾಗೂ ದಿಟ್ಟತನದ ಪರಿಹಾರಗಳನ್ನು ಕಂಡುಕೊಳ್ಳುವ ರಾಜಕೀಯ ನೈಪುಣ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಗೋಪಾಲಯ್ಯ ಬಣ್ಣಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಹಾಗೂ 35ನೇ ವಿಧಿ ರದ್ದುಗೊಳಿಸುವ ಬಗ್ಗೆ ಕೈಗೊಂಡ ನಿರ್ಧಾರ ಭಾರತದ ಅಖಂಡತೆ ಮತ್ತು ಏಕತೆಯನ್ನು ರಕ್ಷಿಸುವ ಹಾದಿಯಲ್ಲಿ ಒಂದು ಐತಿಹಾಸಿಕ ನಿರ್ಧಾರ.
ಮಹಾಮಾರಿ ಕೊರೋನ ವೈರಸ್ ಜಗತ್ತಿನ ಉದ್ದಗಲಕ್ಕೂ ಸ್ಫೋಟಗೊಂಡ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರಗಳು ಇಡೀ ಜಗತ್ತಿಗೆ ಮಾದರಿ ಆಯಿತು. ಕೊರೋನಾ ಹೆಮ್ಮಾರಿ ಭಾರತವನ್ನು ಪ್ರವೇಶಿಸಿದ ಗಳಿಗೆಯಿಂದಲೇ ಕೊರೋನಾ ವ್ಯಾಪಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮವಾಗಿ ಭಾರತದ ಲಕ್ಷಾಂತರ ಜನರು ಜೀವ ಉಳಿಯಿತು ಎಂದು ಅವರು ಹೇಳಿದ್ದಾರೆ.ತಮ್ಮ ದಿಟ್ಟ ನಿರ್ಧಾರ ರಾಜಕೀಯ ಇಚ್ಛಾಶಕ್ತಿಯ ಪರಿಣಾಮ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರಾಗಿ ಮೋದಿಯವರು ಹೊರಹೊಮ್ಮಿದ್ದಾರೆ. ಇಂಥ ದೂರದೃಷ್ಟಿಯ ಹಾಗೂ ರಾಜಕೀಯ ಇಚ್ಛಾಶಕ್ತಿಯ ಪ್ರಧಾನಿಯನ್ನು ಹೊಂದಿರುವುದು ನಿಜಕ್ಕೂ ಭಾರತಕ್ಕೆ ಮತ್ತು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಕೆ ಗೋಪಾಲಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿ, ನವಭಾರತ ನಿರ್ಮಾಣದ ಸಂಕಲ್ಪದೊಂದಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಮಂತ್ರವನ್ನು ಸಾಕಾರಗೊಳಿಸಲು ಕಾರ್ಯನಿರತವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ಅವಧಿಯಲ್ಲಿ ಒಂದು ಸಾರ್ಥಕ ವರ್ಷವನ್ನು ಇಂದು ಪೂರೈಸಿದೆ. ಪ್ರಧಾನಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಜಗತ್ತಿನ ಮಹಾ ನಾಯಕರಲ್ಲಿ ಅಗ್ರಗಣ್ಯರಾದ ನರೇಂದ್ರ ಮೋದಿ ಅವರ ಸರಕಾರ 2ನೇ ಅವಧಿಯಲ್ಲಿ ಒಂದು ವರ್ಷದ ಮೈಲುಗಲ್ಲನ್ನು ಯಶಸ್ವಿಯಾಗಿ ದಾಟಿದೆ. ಅವರ ದಿಟ್ಟ ಕ್ರಮಗಳು, ಆಡಳಿತದ ಪರಿ ಪ್ರತಿಯೊಬ್ಬ ರಾಜಕೀಯ ನಾಯಕನಿಗೂ ಮಾದರಿ. ಅವರ ನೇತೃತ್ವದಲ್ಲಿ ಭಾರತ ಕೋವಿಡ್ ವೈರಸ್ ಅನ್ನು ಎದುರಿಸುತ್ತಿರುವ ರೀತಿಗೆ ಇಡೀ ಜಗತ್ತು ತಲೆದೂಗುತ್ತಿದೆ. ಅವರು ಜಾರಿಗೆ ತಂದಿರುವ ಸುಧಾರಣೆಗಳು ಎಲ್ಲರಿಂದ ಪ್ರಶಂಸೆಗೊಳಗಾಗಿವೆ. ಅವರ ನಾಯಕತ್ವದಲ್ಲಿ ಭಾರತ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.