ನವದೆಹಲಿ, ಮೇ ೨೦,ದೇಶಾದ್ಯಂತ ಕೋವಿಡ್ -೧೯ ಸೋಂಕು ಪ್ರಕರಣಗಳು ಒಂದು ಲಕ್ಷದ ಗಡಿ ದಾಟುವುದರೊಂದಿಗೆ ಕೊರೊನಾ ವೈರಸ್ ತೀವ್ರವಾಗಿ ಹಬ್ಬಿರುವ ಜಗತ್ತಿನ ೧೦ ಅಗ್ರ ದೇಶಗಳ ಸಾಲಿಗೆ ಭಾರತ ಕೂಡ ಸೇರಿದೆ. ವೈರಸ್ ಹೆಚ್ಚುವರದಿಯಾಗುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವುಗಳ ಪ್ರಮಾಣ ಅತ್ಯಂತ ಕಡಿಮೆ ಇದ್ದರೂ, ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಳ್ಳುತ್ತಿರುವುದು ಅತ್ಯಂತ ಕಳವಳ ಉಂಟುಮಾಡಿದೆ.ಕೋವಿಡ್ -೧೯ ಸೂಕ್ಷ್ಮ ಪ್ರದೇಶವಾಗಿ ಭಾರತ ಬದಲಾಗುತ್ತಿರುವುದು ಕಂಪನ ಸೃಷ್ಟಿಸುತ್ತಿದೆ. ಸೋಮಕು ಪ್ರಕರಣಗಳು ಊಹೆಗೂ ನಿಲುಕದಂತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದಿರುವುದು ಗಮನಾರ್ಹವಾಗಿದೆ.
ಮೇ ೭ರಿಂದ ಭಾರತದಲ್ಲಿ ಪ್ರತಿದಿನ ೩,೨೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇನ್ನೂ ಕಳೆದ ನಾಲ್ಕು ದಿನಗಳಿಂದ ಕೊರೊನಾ ಪ್ರಕರಣಗಳು ದಿನಕ್ಕೆ ೪,೯೫೦ಕ್ಕೂ ಹೆಚ್ಚು ಬೆಳಕಿಗೆ ಬರುತ್ತಿವೆ. ಇದರ ಭಾಗವಾಗಿ ಬುಧವಾರ ಒಂದೇ ದಿನ ೫, ೬೧೧ ಕೋವಿಡ್ -೧೯ ಪ್ರಕರಣಗಳು ವರದಿಯಾಗಿವೆ.
ಈ ಪರಿಸ್ಥಿಯಲ್ಲಿ ಈ ಹಿಂದೆ ಪ್ರತಿ ದಿನವೂ ಮಾದ್ಯಮಗಳಿಗೆ ದೇಶದಲ್ಲಿನ ಕೊರೊನಾ ಪ್ರಕರಣಗಳ ಪರಿಸ್ಥಿತಿ ವಿವರಿಸುತ್ತಿದ್ದ ಆರೋಗ್ಯ ಸಚಿವಾಲಯ ಈಗ ಮುಖ ತಿರುಗಿಸಿಕೊಂಡಿದೆ.ಕಳೆದ ಎಂಟು ದಿನಗಳಿಂದ ಸ್ಥಳೀಯ ಮಟ್ಟದಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿ, ಅದನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಲು ಆರೋಗ್ಯ ಸಚಿವಾಲಯ ಒಂದೇ ಒಂದು ಮಾಧ್ಯಮ ಸಭೆಯನ್ನೂ ನಡೆಸಿಲ್ಲ. ಕೊನೆಯದಾಗಿ ಮೇ ೧೧ ರಂದು ಆರೋಗ್ಯ ಸಚಿವಾಲಯ ಮಾಧ್ಯಮ ಗೋಷ್ಟಿ ನಡೆಸಿತ್ತು. ವೈರಸ್ ವ್ಯಾಪಕವಾಗಿ ಹರಡುತ್ತಿರುವಾಗ ಮಾಧ್ಯಮಗಳಿಗೆ ಏಕೆ? ನೇರವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತಿಲ್ಲ ಎಂಬ ಬಗ್ಗೆ ಯಾವುದೇ ವಿವರಣೆ ಲಭಿಸುತ್ತಿಲ್ಲ ಇನ್ನೂ ಮೇ ೧೧ ರಿಂದ ೨೦ ನಡುವೆ ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಶೇ. ೫೯ರಷ್ಟು ಏರಿಕೆಗೊಂಡು ೬೭,೧೫೨ ರಿಂದ ೧,೦೬,೭೫೦ಕ್ಕೆ ಏರಿಕೆಯಾಗಿವೆ.
ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದಾಗ ದಿನವೂ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ಸಾಂಕ್ರಾಮಿಕ ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿ, ಪತ್ರಕರ್ತರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿದ್ದ ಆರೋಗ್ಯ ಸಚಿವಾಲಯ ಪ್ರಕರಣಗಳು ವಿಪರೀತ ಹೆಚ್ಚುತ್ತಿರುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಬರುತಿಲ್ಲ.ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿರುವಾಗ ಸತತ ೮ ದಿನಗಳಿಂದ ಆರೋಗ್ಯ ಸಚಿವಾಲಯ ಮಾಧ್ಯಮ ಸಮಾವೇಶ ನಡೆಸದಿರುವುದು ಚರ್ಚೆಯ ಅಂಶವಾಗಿದೆ. ಆರೋಗ್ಯ ಸಚಿವಾಲಯ ವೆಬ್ ಸೈಟ್ ನಲ್ಲಿ ಕೊರೊನಾ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತಿತರ ಅಂಕಿ ಅಂಶಗಳನ್ನು ಪ್ರತಿದಿನ ಬೆಳಗ್ಗೆ ನವೀಕರಿಸುವ ಜತೆಗೆ ನೇರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರೆ ಜನರಿಗೆ ಪೂರ್ಣ ಮಾಹಿತಿ ನೀಡುವ ಜತೆಗೆ ಪತ್ರಕರ್ತರು ಕೇಳುವ ಪ್ರಶ್ನೆಗಳ ಮೂಲಕ ಜನಸಾಮಾನ್ಯರ ಸಂದೇಹಗಳನ್ನು ಪರಿಹರಿಸುವ ಅವಕಾಶ ಲಭಿಸಲಿದೆ.