ಕೇಂದ್ರ, ರಾಜ್ಯದ ಪ್ಯಾಕೇಜ್ ಸ್ವೇಚ್ಛಾಚಾರದ ಪೊಳ್ಳು ಘೋಷಣೆ : ಹೆಚ್ ಡಿ ಕೆ ಲೇವಡಿ

ಬೆಂಗಳೂರು,ಮೇ. 19,ಕೇಂದ್ರ, ರಾಜ್ಯ ಸರ್ಕಾರಗಳು  ಜನಹಿತಕ್ಕಿಂತಲೂ ಸ್ವೇಚ್ಛಾಚಾರಕ್ಕೆ ಪ್ಯಾಕೇಜ್ ಘೋಷಣೆಗಳನ್ನ ಮಾಡಿದ್ದು , ಇವುಗಳನ್ನು  ಟೀಕಿಸಿದವರನ್ನು ಬಿಜೆಪಿ ನಾಯಕರು ದೇಶದ್ರೋಹಿಗಳಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.ವಿಧಾನಸೌಧದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೋವಿಡ್ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಪ್ಯಾಕೇಜ್ಗಳನ್ನು ಕಟುವಾಗಿ ಟೀಕಿಸಿದ ಕುಮಾರಸ್ವಾಮಿ, ಜಿಡಿಪಿಯ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸಿದರು. ಯಾವುದೇ ಪೂರ್ವ ತಯಾರಿಯಿಲ್ಲದೇ ಬೇಕಾಬಿಟ್ಟಿಯಾಗಿ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಪ್ರತಿಹಂತದಲ್ಲಿ ಅಸಮಾದಾನ, ಆಕ್ರೋಶ ಹೊರಹಾಕಿದರು.
ಮಾಸ್ಕ್ ಇಲ್ಲ ಸ್ಯಾನಿಟೈಸರ್ ಇಲ್ಲ ಎಂದು ಹೇಳಿ ದುಡ್ಡುಹೊಡೆಯುವ ಕೆಲಸ ಮಾಡುತ್ತಿದ್ದಾರೆ.ಕೇಂದ್ರದ ಆರ್ಥಿಕ ಸಚಿವರು ಪೊಳ್ಳು ಭಾಷಣ ಬಿಟ್ಟು ಎಲ್ಲರಿಗೂ ನೆರವು ಘೋಷಿಸಬೇಕು.ಬಡವರ ಜೀವ ಉಳಿಸುವುದು ನಿಮ್ಮ ಕರ್ತವ್ಯ.ನೀವು ಒಳ್ಳೆಯ ಇಂಗ್ಲೀಷ್ ಮಾತಾಡಬಹುದು, ಇಂಗ್ಲೀಷ್ ಮಾತಾಡಿದ ಮಾತ್ರಕ್ಕೆ ಜನರ ಜೀವ ಉಳಿಯುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರಿಗೇಟು  ನೀಡಿದರು.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.ಮೇ 13 ರಂದು ಮೊದಲ ಕಂತಿನಲ್ಲಿ ವಿತ್ತ ಸಚಿವರು ಎಂಎಸ್ಎಂಇ ಗೆ ಸಂಬಂಧಿಸಿದ 6 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು.ನಿತರ 4 ದಿನಗಳ ಕಾಲ ನಿರಂತರವಾಗಿ ಪ್ರಧಾನ ಮಂತ್ರಿಗಳ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಿದ್ದರು.ಕೇಂದ್ರ ಸರ್ಕಾರದ ಘೋಷಣೆಯಿಂದ ಜನರ ಸಂಕಷ್ಟಕ್ಕೆ ಪರಿಹಾರ ದೊರಕಬಹುದೆಂಬ  ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ನಿರಾಶೆ ಮೂಡಿಸಿದೆ ಎಂದರು .
20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಹಲವಾರು ವಿಮರ್ಶೆ ಮಾಡಿದ್ದಾರೆ.ಚಿದಂಬರಂ  ಜಿಡಿಪಿಯ 1% ಕೊಟ್ಟಿದ್ದಾರೆ ಎಂದಿದ್ದಾರೆ.ಆದರೆ ಶೇಕಡಾವಾರು ಎಷ್ಡು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಕೇಂದ್ರದ ನಾಯಕರು ಮೌನವಾಗಿದ್ದಾರೆ. ಎಂದರು. ಪ್ಯಾಕೇಜ್ನಿಂದ ಜನರಿಗೆ  ಆಗಿವ ಲಾಭ ಏನು ಎನ್ನುವುದು ಮುಖ್ಯ.ಕೇಂದ್ರದ ಪ್ಯಾಕೇಜ್ ನಿಂದ ತುಂಬಾ ನಿರಾಸೆದಾಯಕವಾಗಿದೆ.ಕೇಂದ್ರದ 4 ಪ್ಯಾಕೇಜ್ ನ ಸಂಪೂರ್ಣ ಅನುಕೂಲಗಳು, ಅನಾನುಕೂಲಗಳ ಬಗ್ಗೆ ಮೊದಲ ಕಂತಿನಲ್ಲಿ ಘೋಷಿಸಲಾದ ಎಂಎಸ್ಎಂಇ ಯೋಜನೆಗಳ ಚಿತ್ರಣವನ್ನು ಜನರ ಮುಂದಿಡುವುದಾಗಿ ಹೇಳಿದರು.
ಪ್ಯಾಕೇಜ್ ಘೋಷಣೆ ಮಾಡುವಾಗ ಹಲವಾರು ತಜ್ಞರು  ಸಲಹೆ ನೀಡಿರುತ್ತಾರೆ.ಆದರೆ ವಿತ್ತ ಸಚಿವರು ಘೋಷಣೆ ಮಾಡಿದ ಪ್ಯಾಕೇಜ್ ಗಳಲ್ಲಿ ಪಾರದರ್ಶಕತೆ ಇಲ್ಲ.ಯಾವ ತಜ್ಞರಿಂದ ಮಾಹಿತಿ ಪಡೆದು ಈ ರೀತಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆಂಬುದೂ ಇಲ್ಲ ಎಂದರು.ಏ.23-24 ರಂದು 15ನೇ ಹಣಕಾಸು ಆಯೋಗದ ಸಲಹಾ ಸಮಿತಿ ಸಭೆ ನಡೆಸಿ, ಇಂದಿನ ದೇಶದ ಪರಿಸ್ಥಿತಿ ಹಿನ್ನೆಲೆಯಲ್ಲಿ  4 ಸಲಹೆ ನೀಡಿದ್ದಾರೆ.
ಕೋವಿಡ್ 19 ಹರಡುವ ಮೊದಲೇ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿವೆ.ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆರ್ಥಿಕವಾಗಿ ದಿವಾಳಿಯಾಗುತ್ತಿರುವುದನ್ನು ಸರಿ ಮಾಡುವ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪಾರಾಗುವ ನಿಟ್ಟಿನಲ್ಲೊ ಕೇಂದ್ರ, ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು? ಇದದರಿಂದ ರಾಜ್ಯಗಳು ಎಷ್ಟು ಸಂಕಷ್ಟಕ್ಕೆ ಸಿಲುಕಿವೆ? ಕೊರೊನಾದಿಂದ ಜಿಡಿಪಿ ಕುಸಿತದ ಬಗ್ಗೆ ಒಂದೊಂದು ಸಂಸ್ಥೆ ಒಂದೊಂದು ಅಂಕಿ ಸಂಖ್ಯೆ ವಿವರ ನೀಡುತ್ತಿವೆ ಎಂದರು. 
ಹಾಗಾಗಿ ಜಿಡಿಪಿಯ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಆಗ್ರಹಪಡಿಸಿದ್ದಾರೆ ಪರಿಹಾರ ಕೊಡುವುದು ಎಂದರೆ ಸಾಲ ನೀಡುವುದು ಎಂದಲ್ಲ.ಘೋಷಿಸಿರುವ ಆರೂವರೆ ಲಕ್ಷ ಕೋಟಿಗಳ ಪ್ಯಾಕೇಜ್ ನಲ್ಲಿ ಕೇಂದ್ರ ಸರ್ಕಾರದ ಪಾಲು ಎರಡೂವರೆ ಸಾವಿರ ಕೋಟಿ ಮಾತ್ರ.ಇಂತಹ ಇವರ ಪ್ಯಾಕೇಜ್ ನಿಂದ ಆರ್ಥಿಕ ಚೇತರಿಕೆ ಕಾಣಲು ತಕ್ಷಣಕ್ಕೆ ಸಾಧ್ಯವಿಲ್ಲ.ಎಂಎಸ್ಎಂಇ ಪ್ಯಾಕೇಜ್ ದೊಡ್ಡ ಮಟ್ಟದ ನೆರವಿಗೆ ಬರುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಆಟೋ ಚಾಲಕರಿಗೆ , ಟ್ಯಾಕ್ಸಿಗಳಿಗೆ ಘೋಷಿಸಿರುವ 20 ಕೋಟಿ ಹಣ ಹಣದಲ್ಲಿ ಎಲ್ಲರಿಗೂ ಪರಿಹಾರ ಕೊಡಲು ಸಾಧ್ಯವಿಲ್ಲ.ಚಾಲಕರ ಇಂದಿನ ಪರಿಸ್ಥಿತಿ ನೋಡಿ ಪ್ಯಾಕೇಜ್ ಘೋಷಿಸಬೇಕಿತ್ತು ಎಂದು ಕುಟುಕಿದರು.ಚನ್ನಪಟ್ಟಣದಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.ಹೆಕ್ಟೇರ್ ಗೆ ಎರಡೂವರೆ ಸಾವಿರ ಘೋಷಿಸಿದ್ದಾರೆ.  ಈ ಸರ್ಕಾರ ಯಾವುದೇ  ಒಳ್ಳೆಯ ಕೆಲಸ ಮಾಡುತ್ತಿಲ್ಲ ಎಂದು ದೂರಿದರು. ವಕ್ಪ್ ಮಂಡಳಿ ಹಣ ಕೋವಿಡ್ ಪರಿಹಾರ ನಿಧಿಗೆ ಬಳಸಲು ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು,ನಿಧಿ ಬಳಕೆಗೆ ವಿರೋಧ ಮಾಡುವುದು ಬಾಲಿಶ. ಇದರಲ್ಲಿ ಜಾತಿ ಪ್ರಶ್ನೆಯೇ ಇಲ್ಲ.ಕೋವಿಡ್ ಜಾತಿ ನೋಡಿ ಬರುವುದಿಲ್ಲ.ಯಾವುದೇ ಜನಪ್ರತಿನಿಧಿಯಾಗಲೀ ಜಾತಿಯಾಧಾರದ ಮೇಲೆ ವಿರೋಧ ಮಾಡುವುದು ಸರಿಯಲ್ಲ ಎಂದು ಅವರು ಸಲಹೆ ಮಾಡಿದರು.