ಬೆಂಗಳೂರು, ಮೇ 26, ದೇಶದಲ್ಲಿ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿ 62 ದಿನಗಳು ಕಳೆದಿದ್ದು, ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷದ ಪ್ಯಾಕೇಜ್ ತಕ್ಷಣಕ್ಕೆ ಯಾರಿಗೂ ಉಪಯೋಗಕ್ಕೆ ಬಾರದಂತಹ ಪ್ಯಾಕೇಜ್ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.ಕೇಂದ್ರ ಘೋಷಿಸಿರುವ ಪರಿಹಾರ ಒಟ್ಟು ಜಿಡಿಪಿಯ ಶೇ 1 ರಷ್ಟು ಮಾತ್ರ ಇದೆ ಎಂದು ಆರ್ಥಿಕ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ.ಅಲ್ಲದೇಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರರು ಇಷ್ಟೊಂದು ದೊಡ್ಡ ಪ್ರಮಾಣದ ಪ್ಯಾಕೇಜ್ ನೀಡಲು ವಾಸ್ತವವಾಗಿ ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.ಕೇಂದ್ರದ ಆರ್ಥಿಕ ಪರಿಹಾರ ರೈತರಿಗೆ ತಕ್ಷಣಕ್ಕೆ ಅನುಕೂಲಕ್ಕೆ ಬರುವಂತಾಗಿದ್ದರೆ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡುವ 2 ಸಾವಿರ ರೂ. ಯಾವುದಕ್ಕೂ ಪ್ರಯೋಜನ ಬರುವುದಿಲ್ಲ.
ಕೇಂದ್ರ ಸರ್ಕಾರ ಪ್ರವಾಸೋದ್ಯಮ, ಸಾರಿಗೆ, ವಿಮಾನಯಾನ, ರೈಲ್ವೆ, ಹೋಟೆಲ್ ಸೇರಿದಂತೆ ವಲಯವಾರು ಪರಿಹಾರ ನೀಡಿದ್ದರೆ ಅವರಿಗೆ ಅನುಕೂಲವಾಗುತ್ತಿತ್ತು. ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಚಾರಕ್ಕಾಗಿ ಈ ಪ್ಯಾಕೇಜ್ ಘೋಷಣೆ ಮಾಡಿದ್ದರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಹಾರ ಘೋಷಣೆ ಮಾಡಲು ಪರದಾಡುವಂತಾಯಿತು ಎಂದು ಖರ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸರ್ಕಾರ ನರೆಗಾ ಯೋಜನೆಗೆ ನೀಡಿರುವ 40 ಸಾವಿರ ಕೋಟಿ ಹೆಚ್ಚುವರಿ ಪರಿಹಾರ 10 ಕೃಷಿ ಕಾರ್ಮಿಕರ ಜೊತೆಗೆ 8 ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಕನಿಷ್ಟ 20 ದಿನ ಮಾತ್ರ ಉದ್ಯೋಗ ನೀಡಬಹುದಷ್ಟೆ. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರು ಹಾಗೂ ಉದ್ಯಮಿಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.