ಚಿಕ್ಕಮಗಳೂರು, ಮೇ 18, ಕೊರೋನಾ ಸೋಂಕು ದೇಶವ್ಯಾಪಿ ಹರಡಿದ್ದು ಮುಂಜಾಗೃತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ನಿಯಮ ಹಾಗೂ ನಿರ್ದೇಶನಗಳನ್ನು ಪಾಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.ಅವರು ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಂಜಾನ್ ಹಬ್ಬ ಆಚರಿಸುವ ಕುರಿತು ಜಿಲ್ಲೆಯ ವಿವಿಧ ತಾಲ್ಲೂಕುಗಳ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಜಾನ್ ಮಾಸವು ಉಪವಾಸ ಇರುವ ಮೂಲಕ ಆತ್ಮನಿವೇದನೆ ಮಾಡಿಕೊಳ್ಳುವ ಸಮಯ. ಆದರೆ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಿಸಿ ಜನರ ಸಂಭ್ರಮವನ್ನು ಕಸಿದಿದೆ. ಹಾಗಾಗಿ ಸರ್ಕಾರ ನಮ್ಮೆಲ್ಲರ ಸುರಕ್ಷತೆ ದೃಷ್ಟಿಯಿಂದಾಗಿ ದೇವಾಲಯ, ಮಸೀದಿ, ಚರ್ಚುಗಳಲ್ಲಿ ಉತ್ಸವ, ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದ್ದು, ಇಲ್ಲಿ ಜನರ ನಂಬಿಕೆಗೆ ತೊಂದರೆ ಮಾಡುವ ಉದ್ದೇಶವಿಲ್ಲ. ಜಿಲ್ಲೆಯ ಎಲ್ಲಾ ಸಮುದಾಯದವರ ಸಹಕಾರದಿಂದಾಗಿ ಜಿಲ್ಲೆ ಈವರೆಗೂ ಹಸಿರು ವಲಯದಲ್ಲೇ ಉಳಿಯಲು ಸಾಧ್ಯವಾಗಿದೆ ಎಂದರು.
ಕೋರೋನಾ ಸೋಂಕು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಇತ್ತೀಚೆಗೆ ನಮ್ಮ ನೆರೆಯ ಹಾಸನ, ಶಿವಮೊಗ್ಗದಲ್ಲಿಯೂ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ನಮ್ಮ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಾರದೇ ಹಸಿರು ವಲಯದಲ್ಲಿ ಗುರ್ತಿಸಿಕೊಂಡಿದೆ. ಇದಕ್ಕೆ ಎಲ್ಲಾ ಸಮುದಾಯ, ಜಿಲ್ಲೆಯ ಜನತೆ ಸಹಕಾರವೇ ಕಾರಣ. ಸೋಂಕಿನ ಬಗ್ಗೆ ಜನತೆ ಭಯಪಡುವುದು ಬೇಡ. ಇದರಿಂದ ಸಾವಿನ ಪ್ರಮಾಣ ಕಡಿಮೆ. ಆದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಛತೆ ಮೂಲಕ ಇದರ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.
ಈ ಬಾರಿಯ ರಂಜಾನ್ ಮಾಸಾಚರಣೆಯನ್ನು ಮುಸಲ್ಮಾನ ಬಾಂಧವರು ಇಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಸ್ವಯಂ ನಿರ್ಧಾರ ಕೈಗೊಂಡು ಆಚರಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುಮತಿ ನಿರ್ದೇಶನದಂತೆ ರಂಜಾನ್ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಆಚರಣೆಗೆ ಅನುಮತಿ ಸಿಕ್ಕಲ್ಲಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆಚರಿಸಬೇಕು. ಅನುಮತಿ ನೀಡದಿದ್ದಲ್ಲಿ ಮನೆಯಲ್ಲೇ ಪ್ರಾರ್ಥಿಸುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಕೇಳಿಕೊಂಡರು.
ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ಪೊಲೀಸ್, ಹಾಗೂ ಜಿಲ್ಲಾಡಳಿತ ನಮ್ಮೆಲ್ಲರ ಒಳಿತಿಗಾಗಿ ಜನ ಸ್ನೇಹಿಯಾಗಿ ಹಗಲಿರುಳು ಶ್ರಮಿಸಿದೆ. ಹಾಗಾಗಿ ಮುಂದೆಯೂ ಎಚ್ಚರಿಕೆ ಅವಶ್ಯಕವಿದ್ದು, ಹೊರ ರಾಜ್ಯ, ಹೊರ ಜಿಲ್ಲೆಯಿಂದ ಯಾವುದೇ ವ್ಯಕ್ತಿಗಳು ಬಂದಲ್ಲಿ ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತದ ಗಮನಕ್ಕೆ ತಂದು ಕ್ವಾರಂಟೈನ್‌ನಲ್ಲಿಡಲು ಸಹಕರಿಸಬೇಕು. ಕೊರೋನಾ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸುರಕ್ಷತಾ ಸಾಧನಗಳನ್ನು ದಾಸ್ತಾನು ಇರಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಮುಖ್ಯವಾಗಿ ಜನತೆ ಸಹಕಾರ ಅಗತ್ಯವಾಗಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಆದರೆ ಸರ್ಕಾರದ ನಿಯಮದಂತೆ 50 ಜನರೊಳಗೊಂಡು ಮನೆಯಲ್ಲಿಯೇ ಆಚರಿಸಬಹುದಾಗಿದೆ ಎಂದ ಅವರು, ಹಸಿರು ವಲಯದ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಬರಲು ಅನುಮತಿ ಇದ್ದು, ಕೆಂಪು ವಲಯದ ವ್ಯಕ್ತಿಗಳಿಗೆ ಕಡ್ಡಾಯ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಮಾತನಾಡಿ, ರಂಜಾನ್ ಆಚರಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸುತ್ತಿದ್ದು, ಅಂತಿಮ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದಾಗ ಅದರ ನಿರ್ದೇಶನದಂತೆಯೇ ಆಚರಣೆಗೆ ಅನುಮತಿ ನೀಡಲಾಗುವುದು ಎಂದರು.ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸದ್ಯ ಇದಕ್ಕೆ ಯಾವುದೇ ಔಷಧಿಗಳು ಇಲ್ಲ. ಹೊರ ಭಾಗದಿಂದ ಯಾವುದೇ ವ್ಯಕ್ತಿಗಳು ಬಂದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸಬೇಕು. ರಂಜಾನ್ ಹಬ್ಬದ ವೇಳೆ ಇರುವ ವಿನಾಯಿತಿಯಂತೆಯೇ ಆಚರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ತಾಲ್ಲೂಕಿನ ಮುಸ್ಲಿಂ ಮುಖಂಡರು ರಂಜಾನ್ ಹಬ್ಬದಲ್ಲಿ ಕನಿಷ್ಠ ಮಂದಿ ಒಳಗೊಂಡಂತೆ ಸರ್ಕಾರದ ನಿಯಮಗಳನ್ನು ಪಾಲಿಸಿ ಈದ್ಗಾ, ಮೊಹಲ್ಲಾಗಳಲ್ಲಿ ನಮಾಜ್ ಮಾಡಲು ಅನುಮತಿ ನೀಡಬೇಕು. ಮಾಂಸ ಖರೀದಿಗೆ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಬೇಕು ಸೇರಿದಂತೆ ಹಲವು ಮನವಿಗಳನ್ನು ಸಚಿವರ ಮುಂದಿಟ್ಟು ಅನುಮತಿಗೆ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಡಿವೈಎಸ್‌ಪಿ ಬಿ.ಎಸ್ ಅಂಗಡಿ ಹಾಗೂ ವಿವಿಧ ತಾಲ್ಲೂಕುಗಳ ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.