ಗದಗ 21: ಐ.ಸಿ.ಎ.ಆರ್.ಹಿಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೋಚಿನ್ ಇವರ ಸಂಯುಕ್ತಾಶ್ರಯದಲ್ಲಿ ದಿ. 20ರಂದು ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಗೋಡಂಬಿ ಬೆಳೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಡಾ. ನಾಗರಾಜಪ್ಪ ಅಡಿವೆಪ್ಪಾರ, ಪ್ರಾಧ್ಯಾಪಕರು (ತೋಟಗಾರಿಕೆ), ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇವರು ಗೋಡಂಬಿ ಬೆಳೆಯು ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದ್ದು, ಗದಗ ಜಿಲ್ಲೆಯ ವಾತಾವರಣ ಈ ಬೆಳೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ರಾಮೇಗೌಡ ಜಿ.ಕೆ., ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರು ಗೋಡಂಬಿ ಬೆಳೆಯಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಗದಗ ಜಿಲ್ಲೆಯ ಗೋಡಂಬಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ.ಜಿ.ಆರ್.ಓದುಗೌಡರ್ ಇವರು ಮಾತನಾಡಿ, ಗದಗ ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿಯು ಉತ್ಕೃಷ್ಠ ಗುಣಮಟ್ಟದ್ದಾಗಿದ್ದು, ರಫ್ತು ಮಾಡಲು ಯೋಗ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹೆಯಿಂದ ಹುಲಕೋಟಿಯಲ್ಲಿ ಗೋಡಂಬಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದ್ದು, ಇದರಿಂದ ಗೋಡಂಬಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯುತ್ತಿದೆ.
ಗೋಡಂಬಿ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಈಶ್ವರ್ಪ ಹಂಚಿನಾಳ ಇವರು ಗೋಡಂಬಿ ಬೆಳೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿ, ಗೋಡಂಬಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಹೆಚ್ಚಿನ ಸಂಶೋಧನೆ ಕೈಗೊಂಡು, ರೈತರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಗದಗ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ ಶಶಿಕಾಂತ ಕೋಟೆಮನಿ ಇವರು ಮಾತನಾಡಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದೊಂದಿಗೆ ಗದಗ ಜಿಲ್ಲೆಯಲ್ಲಿ ಸುಮಾರು 2000 ಎಕರೆಯಷ್ಟು ಗೋಡಂಬಿ ಬೆಳೆಯನ್ನು ವಿಸ್ತರಿಸಲಾಗಿದೆ. ಗೋಡಂಬಿ ಬೆಳೆಗಾರರಿಗೆ ಸಸಿ ವಿತರಣೆ ಹಾಗೂ ಬೆಳೆ ನಿರ್ವಹಣೆಗೆ ಸಹಾಯಧನ ನೀಡುವ ಮೂಲಕ ತೋಟಗಾರಿಕೆ ಇಲಾಖೆ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೋಚಿನ್ ನೆರವಾಗುತ್ತಿವೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ. ಮಂಕಣಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಡಂಬಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಉತ್ಪಾದನೆಯಾಗುತ್ತಿದ್ದು, ಅದರ ಮೌಲ್ಯವರ್ಧನೆಗೆ ವಿಪುಲ ಅವಕಾಶಗಳಿವೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಚ್.ಭಂಡಿ ಸ್ವಾಗತಿಸಿದರು, ಡಾ. ಕೆ.ವ್ಹಿ.ಪಾಟೀಲ ವಂದಿಸಿದರು, ಹೇಮಾವತಿ ಹಿರೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ವಿನಾಯಕ ನಿರಂಜನ್ ನಿರೂಪಿಸಿದರು. ಹುಲಕೋಟಿ ಗ್ರಾಮದ ಪ್ರಗತಿಪರ ರೈತರಾದ ವಿಶ್ವನಾಥಗೌಡ ಹಿರೇಗೌಡರ್, ಸುಭಾಸಗೌಡ ಆದಪ್ಪಗೌಡರ್, ಕೆ.ವ್ಹಿ ಆದಪ್ಪಗೌಡರ್ ಇನ್ನಿತರರು ಉಪಸ್ಥಿತರಿದ್ದರು.
ಗದಗ ಜಿಲ್ಲೆಯ ಸುಮಾರು 140 ಕ್ಕೂ ಹೆಚ್ಚು ಗೋಡಂಬಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ನಂತರ ಗೋಡಂಬಿ ಬೇಸಾಯದ ಕುರಿತು ತಾಂತ್ರಿಕ ಸಲಹೆ ಹಾಗೂ ರೈತರ ಜೊತೆ ಗುಂಪು ಚರ್ಚೆಯನ್ನು ಏರಿ್ಡಸಲಾಯಿತು. ತದನಂತರ ಗೋಡಂಬಿ ಬೆಳೆದ ರೈತರ ತೋಟಗಳಿಗೆ ಹಾಗೂ ನೂತನವಾಗಿ ಪ್ರಾರಂಭವಾಗಿರುವ ಗೋಡಂಬಿ ಸಂಸ್ಕರಣಾ ಘಟಕಕ್ಕೆ ಕ್ಷೇತ್ರ ಭೆಟ್ಟಿಯನ್ನು ಏರಿ್ಡಸಲಾಯಿತು.