ರಜನಿಕಾಂತ್ ವಿರುದ್ದ ಪ್ರಕರಣ ದಾಖಲು

rajanikanta

ಚೆನ್ನೈ,  ಜ ೧೮: ತಮಿಳು ಸೂಪರ್ ಸ್ಟಾರ್ ರಜನಿಕಾಂತ್   ದ್ರಾವಿಡ ಚಳವಳಿಯ ಪಿತಾಮಹ  ಪೆರಿಯಾರ್ ವಿರುದ್ಧ  ಸಂಚಲನಾತ್ಮಕ   ಹೇಳಿಕೆ  ನೀಡಿ  ತಮಿಳುನಾಡಿನಲ್ಲಿ ಈಗ  ವಿವಾದಕ್ಕೆ ಒಳಗಾಗಿದ್ದಾರೆ.  

ಇತ್ತೀಚೆಗೆ ನಡೆದ ತುಘಲಕ್ ಪತ್ರಿಕೆಯ ೫೦ ನೇ ವಾರ್ಷಿಕೋತ್ಸವ   ಕಾರ್ಯಕ್ರಮದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಹೇಳಿಕೆ ಸಂಬಂಧ ರಜನಿಕಾಂತ್   ವಿರುದ್ದ  ದ್ರಾವಿಡರ್ ವಿಡುದಲೈ ಕಳಗಂ  ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು.   ರಾಜಕೀಯ ಪ್ರವೇಶಕ್ಕಾಗಿ,   ಪೆರಿಯಾರ್  ಗೌರವ ಪ್ರತಿಷ್ಟೆಗಳಿಗೆ ಭಂಗ ತಂದಿದ್ದಾರೆ  ಎಂದು ದೂರಿ  ಕೋವೈ ಪೊಲೀಸರಿಗೆ   ದೂರು ನೀಡಿದ್ದಾರೆ. 

ಪೆರಿಯಾರ್  ಅವರನ್ನು  ಅಪಮಾನ ಗೊಳಿಸಿರುವ ರಜನಿಕಾಂತ್  ವಿರುದ್ದ  ಭಾರತೀಯ  ದಂಡ ಸಂಹಿತೆಯ ವಿವಿಧ  ಕಲಂಗಳಡಿ  ಪ್ರಕರಣ ದಾಖಲಿಸುವಂತೆ   ಕಳಗಂ ಮುಖ್ಯಸ್ಥ   ಕೊಳತ್ತೂರು ಮಣಿ  ಪೊಲೀಸರಿಗೆ ನೀಡಿರುವ ದೂರಿನಲ್ಲಿ  ತಿಳಿಸಿದ್ದಾರೆ. ದೂರಿನ ಸಂಬಂಧ ರಜನಿ ವಿರುದ್ದ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ತಿಂಗಳ ೧೪ ರಂದು  ರಜನಿ ಕಾಂತ್   ತುಘಲಕ್   ಪತ್ರಿಕೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ  ಮಾತನಾಡಿ,  ೧೯೭೧ ರಲ್ಲಿ ಸೇಲಂನಲ್ಲಿ ನಡೆದ  ಸಭೆಯೊಂದನ್ನು ಸ್ಮರಿಸಿಕೊಂಡು,  ಆ ಸಮಯದಲ್ಲಿ ಪೆರಿಯಾರ್ ಸೀತಾ ರಾಮರ  ಪ್ರತಿಮೆಗಳನ್ನು ಬೆತ್ತಲೆಯಾಗಿ   ಪ್ರದರ್ಶಿಸಿದರು  ಎಂದು ರಜನಿಕಾಂತ್ ಹೇಳಿದರು. ಈ  ಘಟನೆಯನ್ನು  ಅಂದಿನ  ಸರ್ಕಾರ  ಜನರಿಗೆ  ತಿಳಿಯದಂತೆ    ರಹಸ್ಯವಾಗಿರಿಸಿತ್ತು   ಎಂದು ರಜನಿ  ಹೇಳಿದರು.  ಈ ಹೇಳಿಕೆಯ ಮೂಲಕ   ಪೆರಿಯಾರ್  ಗೌರವಕ್ಕೆ  ದಕ್ಕೆ ತಂದಿದ್ದಾರೆ  ಎಂದು ದ್ರಾವಿಡರ್  ವಿಡುದಲೈ ಕಳಗಂ ನಾಯಕರು ರಜನಿ ವಿರುದ್ದ ದೂರಿದ್ದಾರೆ.   ಪೆರಿಯಾರ್ ಅವರ ಪ್ರತಿಷ್ಠೆಗೆ ಧಕ್ಕೆ ತರುವುದು ರಜನಿ ಕಾಂತ್ ಉದ್ದೇಶವಾಗಿದೆ  ಎಂದು ಕಳಗಂ  ನಾಯಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ರಾಜಕೀಯ ಪ್ರವೇಶದ  ತಯಾರಿಯಲ್ಲಿರುವ  ರಜನಿ ಕಾಂತ್  ಅವರಿಗೆ   ಈ ಹೇಳಿಕೆ  ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆಯೋ  ಕಾದು ನೋಡಬೇಕು.