ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಿ: ವಾಟಾಳ್ ಆಗ್ರಹ

ಹುಬ್ಬಳ್ಳಿ, ಜೂ 13,ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ  ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪರೀಕ್ಷೆ ರದ್ದು ಮಾಡುವಂತೆ ಒತ್ತಾಯಿಸಿ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಅವರು ಜಾಗಟೆ ಬಾರಿಸಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ  ಪ್ರತಿಭಟನೆ ನಡೆಸಿದರು.ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಪರೀಕ್ಷೆ ಬರೆಯುವುದು ಕಷ್ಟವಾಗಲಿದೆ. ಹೀಗಾಗಿ ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲರನ್ನೂ ಉತ್ತೀರ್ಣ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರೊಂದಿಗೆ ಪೋಷಕರು ಸಹ ಬರಲಿದ್ದಾರೆ. ಹೀಗಾಗಿ ಹೊರಬರುವ ಲಕ್ಷಾಂತರ ಜನರ ರಕ್ಷಣೆಯ ಜವಾಬ್ದಾರಿ ಯಾರು ಹೊರಲಿದ್ದಾರೆ. ಅವರು ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಈಗಾಗಲೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ತೆಲಂಗಾಣ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಲಾಗಿದೆ. ಹೀಗಾಗಿ ಅದೇ ಕ್ರಮವನ್ನು ಇಲ್ಲಿಯೂ ಅನುಸರಿಸಬೇಕು ಎಂದು ಆಗ್ರಹಿಸಿದರು.ಕೊರೊನಾ ಸೋಂಕಿತರ ಕಡಿಮೆ ಇದ್ದಾಗ  ಲಾಕ್ ಡೌನ್ ಮಾಡಿ, ಈಗ ಸೋಂಕಿತರ ಸಂಖ್ಯೆ ಹೆಚ್ಚಾದ  ಮೇಲೆ ಸಂತೆ ಮಾಡುತ್ತಿದ್ದೀರಿ ಎಂದು ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.ಇನ್ನು, ಆನ್ಲೈನ್ ಶಿಕ್ಷಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ ಅವರು,  ಇದು ಪೋಷಕರ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎಂದು ಕಿಡಿಕಾರಿದರು.