ಒಲಿಂಪಿಕ್ಸ್ ಗೆ ಕ್ರೀಡಾಪಟುಗಳನ್ನು ಕಳುಹಿಸಲ್ಲ ಎಂದ ಕೆನಡಾ

ನವದೆಹಲಿ, ಮಾ 23, ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಜಾಗತಿಕವಾಗಿ ಬಹುತೇಕ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ.  ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಪ್ರತಿಷ್ಠಿತ ಒಲಿಂಪಿಕ್ಸ್ ಮಹಾಕೂಟಕ್ಕೂ ಕೊರೊನಾ ವೈರಸ್ ಸೋಂಕಿನ ಭೀತಿ ತಟ್ಟಿದೆ. ಹೀಗಾಗಿ ಕ್ರೀಡಾಪಟುಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತಾದೃಷ್ಟಿಯಿಂದ ಕೂಟವನ್ನು ಮುಂದೂಡುವಂತೆ ಅಮೆರಿಕ ಸೇರಿದಂತೆ ಹತ್ತಕ್ಕೂಹೆಚ್ಚು ದೇಶಗಳು ಈಗಾಗಲೇ ಟೂರ್ನಿಯ ಆಯೋಜಕರನ್ನು ಒತ್ತಾಯಿಸಿವೆ.
ಆದರೆ ಒಲಿಂಪಿಕ್ಸ್ ನಡೆಸುವ ಅಥವಾ ಮುಂದೂಡುವ ಬಗ್ಗೆ ಜಪಾನ್ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಈ ಮಧ್ಯೆ, ಕೆನಡಾ ಟೋಕಿಯೊ ಒಲಿಂಪಿಕ್ಸ್ ಗೆ ತಮ್ಮ ದೇಶದಿಂದ ಯಾವುದೇ ಅಥ್ಲೀಟ್ ಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ. '' ಜುಲೈ 24ರಿಂದ ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್ ಗೆ ತಮ್ಮ ದೇಶದಿಂದ ಯಾವುದೇ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ,'' ಎಂದು ಕೆನಡಾ ಒಲಿಂಪಿಕ್ ಸಮಿತಿ ಮತ್ತು ಕೆನಡಾ ಪ್ಯಾರಾಲಿಂಪಿಕ್ಸ್ ಸಮಿತಿ ತಿಳಿಸಿದೆ. ಇದರೊಂದಿಗೆ ಈ ರೀತಿ ಹೇಳಿದ ಮೊದಲ ರಾಷ್ಟ್ರ ಕೆನಡಾವಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ಒಲಿಂಪಿಕ್ಸ್ ಕೂಟವನ್ನು ಮುಂದೂಡುವಂತೆ ಕೆನಡಾ ಒಲಿಂಪಿಕ್ ಸಮಿತಿ ಈಗಾಗಲೇ ಒತ್ತಾಯಿಸಿದೆ.'' ನಮ್ಮ ಅಥ್ಲೀಟ್ ಗಳ ಆರೋಗ್ಯ ಮತ್ತು ಸುರಕ್ಷತೆಗಿಂತ ಕೂಟ ದೊಡ್ಡದಲ್ಲ,'' ಎಂದು ಕೆನಡಾ ಹೇಳಿದೆ.