ನಾಲ್ಕು ವಾರಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ನಿರ್ಧಾರ: ಐಒಸಿ

ಲೂಸನ್ನೆ, ಮಾ 23,ಕೋವಿಡ್ -19 (ಕೊರೊನಾ ವೈರಸ್ ಸೋಂಕು) ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾನುವಾರ ಹೇಳಿದೆ. "ಎಲ್ಲ ಮಧ್ಯಸ್ಥಗಾರರೊಂದಿಗೆ, ವಿಶ್ವಾದ್ಯಂತ ಆರೋಗ್ಯ ಪರಿಸ್ಥಿತಿಯ ತ್ವರಿತ ಬೆಳವಣಿಗೆ ಮತ್ತು ಒಲಿಂಪಿಕ್ ಕ್ರೀಡಾಕೂಟದ ಮೇಲೆ ಅದರ ಪ್ರಭಾವದ ಬಗ್ಗೆ ನಮ್ಮ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ನಾವು ಭಾನುವಾರ ವಿವರವಾದ ಚರ್ಚೆಗಳನ್ನು ಪ್ರಾರಂಭಿಸಿದ್ದೇವೆ, ಮುಂದೂಡುವಿಕೆಯ ಸನ್ನಿವೇಶವೂ ಸೇರಿದಂತೆ. ಮುಂದಿನ ನಾಲ್ಕು ವಾರಗಳಲ್ಲಿ ಈ ಚರ್ಚೆಗಳನ್ನು ಅಂತಿಮಗೊಳಿಸಲಾಗುವುದು "ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ,  ಜಾಗತಿಕ ಕ್ರೀಡಾಪಟುಗಳ ಸಮುದಾಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಐಸಿಒ ಅಧ್ಯಕ್ಷರ ಪ್ರಕಾರ, ಜಪಾನ್ ನಲ್ಲಿ ಕೋವಿಡ್ -19 ತಹಬಧಿಗೆ ಬಂದಲ್ಲಿ ಟೋಕಿಯೊದಲ್ಲಿ  ನಿಗದಿತ ಅವಧಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಜಪಾನ್ ಗೆ  ಇನ್ನಷ್ಟು  ವಿಶ್ವಾಸ ಹೆಚ್ಚಾಗಲಿದೆ ಎನ್ನಲಾಗಿದೆ. ಜಪಾನ್ ನಲ್ಲಿನ ಮಹತ್ವದ ಬೆಳವಣಿಗೆಯೆಂದರೆ ಅಲ್ಲಿನ ಜನರು ಈಗಾಗಲೇ ಒಲಿಂಪಿಕ್ ಕ್ರೀಡಾ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.  ಇದು ಇಲ್ಲಿನ ಆಯೋಜಕರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.  ಜುಲೈ 24ರಿಂದ ಆಗಸ್ಟ್ 9ರವರೆಗೆ ಒಲಿಂಪಿಕ್ಸ್ ಕ್ರೀಡಾಕೂಟ ನಿಗದಿಯಾಗಿದೆ.