ಶುಶ್ರೂಷಕಿ ಸುನಂದಾಗೆ ಕರೆ ಮಾಡಿ ಧೈರ್ಯ ತುಂಬಿದ ಮುಖ್ಯಮಂತ್ರಿ

ಬೆಳಗಾವಿ,  ಏ.8, ಕಳೆದ 15 ದಿನಗಳಿಂದ ತಮ್ಮ ಮನೆಗೆ ಹೋಗದೇ, ಮಗಳ ಮುಖ ನೋಡಲಾಗದೇ  ಹಗಲಿರುಳು ಶ್ರಮಿಸುತ್ತಿರುವ ಶುಶ್ರೂಷಕಿ ಸುನಂದಾ ಅವರಿಗೆ ಮುಖ್ಯಮಂತ್ರಿ ಬಿಎಸ್​  ಯಡಿಯೂರಪ್ಪ ಕರೆ ಮಾಡಿ ಧೈರ್ಯ ತುಂಬಿದ್ದಾರೆ.ಬುಧವಾರ  ಸುನಂದಾ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀವು ಬಹಳ ಕಷ್ಟಪಟ್ಟು ಕೆಲಸ  ಮಾಡುತ್ತಿರುವಿರಿ ಅಮ್ಮ. ಮಕ್ಕಳನ್ನು ನೋಡದೇ ಕೆಲಸ ಮಾಡುತ್ತಿದ್ದೀರಿ. ಇದನ್ನು ನಾನು  ಟಿ.ವಿಯಲ್ಲಿ ನೋಡಿದ್ದೇನೆ. ದಯವಿಟ್ಟು ಸಹಕರಿಸಿ. ನಿಮಗೆ ಮುಂದೆ ಒಳ್ಳೆಯ ಅವಕಾಶ  ಸಿಗುತ್ತದೆ, ನಾನು ನಿಮ್ಮನ್ನು ಗಮನಿಸುತ್ತೇನೆ. ದೇವರು ಒಳ್ಳೆದು ಮಾಡಲಿ, ನಿಮ್ಮ  ಶ್ರಮಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಸುನಂದಾ  ಅವರು, ಕಳೆದ 4 ವರ್ಷಗಳಿಂದ ಬೆಳಗಾವಿಯ  ಬಿಮ್ಸ್‌ನಲ್ಲಿ ಸ್ಟಾಫ್‌ ನರ್ಸ್‌ ಆಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 7 ಜನರಲ್ಲಿ ಕೊರೊನಾ ಸೋಂಕು  ಪತ್ತೆಯಾಗಿದ್ದು ಸೋಂಕಿತರಿಗೆ, ಶಂಕಿತರಿಗೆ ಬಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುತ್ತಿರುವವರು ಯಾವುದೇ ಕಾರಣಕ್ಕೂ ಮನೆಗೆ ಹೋಗಬಾರದು ಎಂದು  ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ  ಕಳೆದ 15 ದಿನಗಳಿಂದ ಸುನಂದಾ ಮನೆ ಕಡೆ ಮುಖ‌‌ ಮಾಡದೇ, ಜಿಲ್ಲಾಡಳಿತ ವ್ಯವಸ್ಥೆ  ಮಾಡಿರುವ ಹೋಟೆಲ್‌ನಲ್ಲೇ ಇತರ ನರ್ಸ್‌ಗಳು ಮತ್ತು ವೈದ್ಯರ ಜೊತೆ  ಕ್ವಾರೆಂಟೈನ್‌ನಲ್ಲಿದ್ದಾರೆ.ಹೀಗಾಗಿಯೇ  ತಾಯಿಯನ್ನು ಕಾಣದೇ ಮಗಳು ಐಶ್ವರ್ಯ ತೀವ್ರ ದುಃಖಿತಳಾಗಿದ್ದು, ದಿನಾಲೂ ಅಮ್ಮನನ್ನು  ನೋಡಬೇಕು ಎಂದು ಹಠ ಮಾಡುತ್ತಿದ್ದಳು. ಹೀಗಾಗಿ ಅವರ ಪತಿ ಸಂತೋಷ್‌ ಮಂಗಳವಾರ ಪತ್ನಿಯನ್ನು  ತೋರಿಸುವುದಕ್ಕೆ ಹೋಟೆಲ್‌ ಬಳಿ ಕರೆತಂದಿದ್ದರು. ಆ ಸಂದರ್ಭದಲ್ಲಿ ದೂರದಿಂದಲೇ ಸುನಂದಾ  ಅವರು ಮಗಳನ್ನು ಕಂಡರು. ತಾಯಿ-ಮಗಳು ಕಣ್ಣೀರು ಹಾಕಿದ್ದ ‌ದೃಶ್ಯ ಮನಕಲಕುವಂತಿತ್ತು. ಇದು  ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ಮುಖ್ಯಮಂತ್ರಿ ಗಮನಿಸಿ ನರ್ಸ್‌ಗೆ ಕರೆ  ಮಾನವೀಯತೆ ಮೆರೆದಿದ್ದಾರೆ.