ಐದು ಐಐಐಟಿಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ, ಫೆ 5  :     ದೇಶದಲ್ಲಿನ ಐದು ಐಐಐಟಿಗಳು ಮತ್ತು  ಸದ್ಯ ಅಸ್ತಿತ್ವದಲ್ಲಿರುವ ಸರ್ಕಾರಿ-ಖಾಸಗಿ ಸಹಭಾಗಿತ್ವದ 15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು ‘ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ’ಗಳೆಂದು ಘೋಷಿಸುವ  ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.  

ಮಸೂದೆಯು ಸಂಸ್ಥೆಗಳಿಗೆ ಪದವಿಗಳನ್ನು ನೀಡುವ ಅಧಿಕಾರವನ್ನು ಒದಗಿಸಿಕೊಡಲಿದೆ.  

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2020 ರ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ (ತಿದ್ದುಪಡಿ) ಮಸೂದೆಗೆ  ಮತ್ತು ಐಐಟಿಐಗಳಿಗೆ 21 ನಿರ್ದೇಶಕರ ಹುದ್ದೆಗಳನ್ನು ನೇಮಕ ಮಾಡುವುದಕ್ಕೆ ಅನುಮತಿ ನೀಡಿದೆ.  

ಸಚಿವ ಸಂಪುಟ ಸಭೆ ನಂತರ ಇಲ್ಲಿ ಸುದ್ದಿಗಾರರಿಗೆ ಸಭೆಯ ವಿವರಗಳನ್ನು ನೀಡಿದ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ವಿಶ್ವವಿದ್ಯಾಲಯವೊಂದು ಇಲ್ಲವೇ  ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ನೀಡುತ್ತಿರುವ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ ಟೆಕ್) ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ (ಎಂ ಟೆಕ್) ಅಥವಾ ಪಿಎಚ್ ಡಿ ಪದವಿಗಳನ್ನು ಐಐಐಟಿ ಸಂಸ್ಥೆಗಳು ನೀಡುವುದಕ್ಕೆ ಮಸೂದೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದರು. 

ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಲವಾದ ಸಂಶೋಧನಾ ನೆಲೆಯನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಸೂದೆ ಸಂಸ್ಥೆಗಳಿಗೆ ಅನುವು ಮಾಡಿಕೊಡುತ್ತದೆ. ಮಸೂದೆಯು ಸೂರತ್, ಭೋಪಾಲ್, ಭಾಗಲ್ಪುರ್, ಅಗರ್ತಲಾ ಮತ್ತು ರಾಯಚೂರುಗಳಲ್ಲಿನ ಸರ್ಕಾರಿ- ಖಾಸಗಿ ಸಹಭಾಗಿತ್ವದ ಐದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಶಾಸನಬದ್ಧ ಸ್ಥಾನಮಾನವನ್ನು ನೀಡುತ್ತದೆ ಮತ್ತು ಇವುಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸುತ್ತದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.