ನವದೆಹಲಿ, ಸೆ 18 ದೇಶಾದ್ಯಂತ ಇ-ಸಿಗರೇಟು ನಿಷೇಧಿಸುವ ಸುಗ್ರೀವಾಜ್ಞೆ ಘೋಷಣೆಗೆ ಕೇಂದ್ರ ಸಚಿವರ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿಷೇಧವು ಇ-ಸಿಗರೇಟುಗಳ ಉತ್ಪಾದನೆ, ಆಮದು, ರಫ್ತು, ಸಾಗಣೆ, ವ್ಯಾಪಾರ, ವಿತರಣೆ, ಸಂಗ್ರಹ ಹಾಗೂ ಜಾಹೀರಾತುಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಆರೋಗ್ಯ ಕಾರ್ಯದರ್ಶಿಪ್ರೀತಿ ಸುಡಾನ್, 2019ರ ಈ ಸುಗ್ರೀವಾಜ್ಞೆಗೆ 'ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧದ ಘೋಷಣೆ' ಎಂದು ಹೆಸರಿಸಲಾಗಿದ್ದು, ಉತ್ಪಾದನೆ, ಆಮದು, ರಫ್ತು, ಸಾಗಣೆ, ವಿತರಣೆ, ಸಂಗ್ರಹ ಮತ್ತು ಜಾಹೀರಾತು ನಿಷೇಧ ಒಳಗೊಂಡಿರುತ್ತದೆ. ಈ ನಿರ್ಧಾರದಿಂದ ಸರ್ಕಾರದ ಆದಾಯ ಹೆಚ್ಚಳವಾಗಲಿದೆ ಎಂದಿದ್ದಾರೆ.
ಇ-ಸಿಗರೇಟ್ ಬಳಸುವವರಿಂದ ಹೊರಹಾಕಲ್ಪಟ್ಟ ಹೊಗೆಯಲ್ಲಿ ಹೆಚ್ಚಿನ ಮಟ್ಟದ ನಿಕೋಟಿನ್ ಅಂಶವಿರುತ್ತದೆ ಅಮೆರಿಕ ಮತ್ತಿತರ ದೇಶಗಳಲ್ಲಿ ಇದರ ಪ್ರಭಾವವು ಹೆಚ್ಚಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
'ಇ-ಸಿಗರೆಟ್ನ ಚಟ ಅಂಟಿಸಿಕೊಂಡವರು ಅದು ಆಹ್ಲಾದಕರ ಎಂದು ಪರಿಗಣಿಸುತ್ತಾರೆ. ಇ-ಸಿಗರೇಟ್ ನಲ್ಲಿ 400 ಕ್ಕೂ ಹೆಚ್ಚು ಬ್ರಾಂಡ್ಗಳಿವೆ ಎನ್ನಲಾಗಿದ್ದು, 150 ಕ್ಕೂ ಹೆಚ್ಚು ಪರಿಮಳದಲ್ಲಿ ಲಭ್ಯವಾಗುತ್ತವೆ, ಆದರೆ ಅವುಗಳಲ್ಲಿ ಯಾವುದೂ ಭಾರತದಲ್ಲಿ ತಯಾರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇ-ಸಿಗರೇಟ್ ನಿಷೇಧದ ನಿರ್ಧಾರ ಜನರ ರಕ್ಷಣೆಗೆ ಅನುಕೂಲವಾಗಲಿದೆ. ಅದರಲ್ಲೂ ವಿಶೇಷವಾಗಿ ಯುವಜನತೆ ಹಾಗೂ ಮಕ್ಕಳನ್ನು ಎ-ಸಿಗರೇಟ್ ಅಭ್ಯಾಸಕ್ಕೆ ಅಂಟದಂತೆ ತಡೆಯಬಹುದಾಗಿದೆ.