ಅಮೆರಿಕದಲ್ಲಿ ಕೊವಿದ್ -19 ಸೋಂಕಿನ ಪ್ರಕರಣಗಳ ಸಂಖ್ಯೆ 91ಕ್ಕೆ ಏರಿಕೆ

ವಾಷಿಂಗ್ಟನ್, ಮಾರ್ಚ್ 3, ಅಮೆರಿಕದಲ್ಲಿ ಒಂದು ದಿನದ ಹಿಂದೆ 60ರಷ್ಟಿದ್ದ ಕೊವಿದ್ -19 ಸೋಂಕಿನ ಪ್ರಕರಣಗಳ ಸಂಖ್ಯೆ ಸದ್ಯ 91ಕ್ಕೆ ಏರಿದೆ ಎಂದು ಅಮೆರಿಕ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಪ್ರಕಟಿಸಿದೆ. ಈ ಪ್ರಕರಣಗಳ ಪೈಕಿ ಕನಿಷ್ಠ 43 ಪ್ರಕರಣಗಳನ್ನು ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಗಳ ಮೂಲಕ ಪತ್ತೆ ಮಾಡಲಾಗಿದೆ. ಇವುಗಳಲ್ಲಿ 16 ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ತಿಳಿಸಿದೆ. ಇತ್ತೀಚಿನ ಮಾಹಿತಿಯಂತೆ ವಿಶ್ವದ ಇತರ ಭಾಗಗಳಿಂದ ಏಕಾಏಕಿ ದೇಶಕ್ಕೆ ವಾಪಸ್ಸಾಗಿರುವವರ ಪೈಕಿ 17 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು 26 ಮಂದಿ ವಿದೇಶಗಳಿಗೆ ಪ್ರಯಾಣಿಸದಿದ್ದರೂ ಸೋಂಕು ಅವರಲ್ಲಿ ದೃಢಪಟ್ಟಿದೆ. ವಿದೇಶಗಳಲ್ಲಿದ್ದ ಸೋಂಕಿತ 48 ಜನರು ಸರ್ಕಾರಿ ವಿಮಾನಗಳ ಮೂಲಕ ಅಮೆರಿಕಕ್ಕೆ ವಾಪಸ್ಸಾಗಿದ್ದಾರೆ ಎಂದು ಕೇಂದ್ರ ತಿಳಿಸಿದೆ. ಅಮೆರಿಕದಲ್ಲಿ ಕೊವಿದ್ -19 ಸೋಂಕಿಗೆ ಇದುವರೆಗೆ ಇಬ್ಬರು ಬಲಿಯಾಗಿದ್ದು, ಸೋಂಕಿತ 17 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.