'ಕೋವಿದ್' ಕುರಿತ ಸುಳ್ಳು ಸುದ್ದಿಗಳನ್ನು ತಡೆಯಲು ತಂತ್ರಜ್ಞಾನ ದೈತ್ಯ ಕಂಪೆನಿಗಳೊಂದಿಗೆ ಡಬ್ಲ್ಯೂಎಚ್ಒ ಚರ್ಚೆ

 ವಾಷಿಂಗ್ಟನ್, ಫೆ 15, ಕೊರೊನವೈರಸ್ (ಕೋವಿದ್ -19) ಕುರಿತ ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗೋಪಾಯಗಳ ಕುರಿತು ಚರ್ಚಿಸಲುವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯು ಪ್ರಮುಖ ತಂತ್ರಜ್ಞಾನ ದೈತ್ಯ ಕಂಪೆನಿಗಳಾದ ಫೇಸ್ಬುಕ್, ಅಮೆಜಾನ್ ಮತ್ತು ಗೂಗಲ್ನ ಪ್ರತಿನಿಧಿಗಳೊಂದಿಗೆ ಸಭೆ ಆಯೋಜಿಸಿತ್ತು.  ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್ನಲ್ಲಿರುವ ಫೇಸ್ಬುಕ್ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆಯಿತು.  ‘ಸೋಂಕು ಕುರಿತು ಸುಳ್ಳು ಸುದ್ದಿಗಳು ಹಬ್ಬುವುದನ್ನು ತಡೆಯಲು ಸಭೆಯಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆವಿಷ್ಕಾರವನ್ನು ಪ್ರೋತ್ಸಾಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ ಎಲ್ಲರೂ ಕೈಜೋಡಿಸಬೇಕೆನ್ನುವ ಕಾಳಜಿಗೆ ಕಂಪೆನಿಗಳು ಸಭೆಯಲ್ಲಿ ಸಮ್ಮತಿಸಿವೆ.’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಆಂಡಿ ಪಟ್ಟಿಸನ್ ಹೇಳಿರುವುದಾಗಿ ಅಮೆರಿಕ ಸಿಎನ್ ಬಿಸಿ ಸುದ್ದಿವಾಹಿನಿ ವರದಿ ಮಾಡಿದೆ. ತಂತ್ರಜ್ಞಾನ ದೈತ್ಯ ಕಂಪೆನಿಗಳು ಸುಳ್ಳು ಮಾಹಿತಿಯ ಬಗ್ಗೆ ಅರಿತು, ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟ ಚುರುಕುಗೊಳಿಸಿದ್ದರಿಂದ ವೈರಸ್ಗೆ ಸಂಬಂಧಿಸಿದಂತೆ ನಿಜ ಸುದ್ದಿಗಳು ಬರಲಾರಂಭಿಸಿವೆ. ಸುಳ್ಳು ಸುದ್ದಿಗಳನ್ನು ತಡೆಯಲು ಮೂರನೇ ವ್ಯಕ್ತಿಗಳನ್ನು ಅವಲಂಬಿಸುವ ಬದಲು ಕಂಪನಿಗಳು  ಅಥವಾ ಅವುಗಳ ಬಳಕೆದಾರರು ಪ್ರಕಟಿಸುವ ಸುದ್ದಿಗಳನ್ನು ಪರಿಶೀಲಿಸಲು ಸಹಾಯ ಮಾಡಬೇಕು ಎಂದು ಪ್ಯಾಟಿಸನ್ ಸಭೆಯಲ್ಲಿ ಸಲಹೆ ನೀಡಿದರು.  ಕೊರೊನಾವೈರಸ್ ಕಳೆದ ಡಿಸೆಂಬರ್ನಲ್ಲಿ ಹುಬೈ ಪ್ರಾಂತ್ಯದಲ್ಲಿರುವ ವುಹಾನ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಅಂದಿನಿಂದ ಮಾರಕ ಸೋಂಕು 25 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ ಚೀನಾದಲ್ಲಿ ವೈರಸ್ ಈಗಾಗಲೇ 1,523 ಜನರನ್ನು ಬಲಿಪಡೆದಿದ್ದು, 66,492 ಜನರು ಸೋಂಕಿಗೆ ತುತ್ತಾಗಿದ್ದಾರೆ. ದುರಂತವೆಂದರೆ, 1,700 ಕ್ಕೂ ಹೆಚ್ಚು ವೈದ್ಯರು ಸೋಂಕಿಗೆ ಒಳಗಾಗಿದ್ದು, ಇವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.