ಬೆಂಗಳೂರು, ಫೆ.14: ಉದ್ಯೋಗದಲ್ಲಿ ಬಡ್ತಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.ನಾಳೆ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಜಾಥಾ ಮೂಲಕ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುತ್ತಿಗೆ ಹಾಕಲಿದ್ದಾರೆ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಸಮಾಧಿ ಮಾಡಲು ಹೊರಟಂತಿದೆ. ಮೀಸಲಾತಿ ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂಬ ಸುಪ್ರೀಂನ ತೀರ್ಪು ಸಮಂಜಸವಲ್ಲ . ಉತ್ತರಾಖಾಂಡ್ ರಾಜ್ಯದಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲವಾಗಿದ್ದಾರೆ. ಆರ್ಎಸ್ಎಸ್ನ ಮೋಹನ್ ಭಾಗವತ್ ಹಾಗೂ ಸಂಸದ ಅನಂತ್ ಕುಮಾರ್ ಹೆಗಡೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಎಲ್ಲರೂ ಸಂವಿಧಾನ ವಿರುದ್ಧವಾಗಿ, ಮೀಸಲಾತಿ ವಿರುದ್ಧವಾಗಿ ಮಾತನಾಡಿದ್ದಾರೆ. ಬಿಜೆಪಿಯವರಿಗೆ ಅಂಬೇಡ್ಕರ್ ವಾದದಲ್ಲಿ, ಗಾಂಧಿ ವಾದದಲ್ಲಿ ವಿಶ್ವಾಸ ಇಲ್ಲ. ಮನುವಾದ ಹಾಗೂ ಗೋಡ್ಸೆ ವಾದದಲ್ಲಿ ನಂಬಿಕೆಇಟ್ಟವರು ಬಿಜೆಪಿಯವರು ಎಂದು ಉಗ್ರಪ್ಪ ಕಿಡಿಕಾರಿದರು.ಬಿಜೆಪಿಯ ನಡೆ ವಿರೋಧಿಸಿ ದೇಶವ್ಯಾಪಿ ಕಾಂಗ್ರೆಸ್ ಹಂತಹಂತವಾಗಿ ಹೋರಾಟ ನಡೆಸಲಿದೆ ಎಂದರು.ಗಣಿಗಾರಿಕೆ ಆರೋಪ ಹೊತ್ತಿರುವ ಸಚಿವ ಆನಂದ್ ಸಿಂಗ್ ಅವರಿಗೆ ನೀಡಿರುವ ಅರಣ್ಯ ಇಲಾಖೆಯನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸದನದ ಒಳಗೆ , ಹೊರಗೆ ನಾವು ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೃಷ್ಣ ಜನ್ಮಸ್ಥಳಕ್ಕೆ ಹೋಗಿ ಬಂದವರು. ಆನಂದ್ ಸಿಂಗ್ ಕೂಡ ಜೈಲಿಗೆ ಹೋಗಿ ಬಂದವರು. ಈ ಇಬ್ಬರಿಗೂ ಕೂಡ ಅವಿನಾಭಾವ ಸಂಬಂಧ ಇದೆ. ಆನಂದ್ ಸಿಂಗ್ ವಿರುದ್ಧ ಹಲವಾರು ಕ್ರಿಮಿನಲ್, ಅರಣ್ಯ ಒತ್ತುವರಿ, ಗಣಿಗಾರಿಕೆ ಕೇಸ್ಗಳಿವೆ. ಇದರಿಂದ ರಕ್ಷಣೆ ಹೊಂದಲು ಅವರನ್ನು ಯಡಿಯೂರಪ್ಪ ಸಂಪುಟಕ್ಕೆ ಸೇರಿಸಿಕೊಂಡಿರಬಹುದು ಎಂದು ಉಗ್ರಪ್ಪ ಟೀಕಿಸಿದರು.ಕಂದಾಯ ಸಚಿವ ಆರ್.ಅಶೋಕ್ ಪುತ್ರ ಮಾಡಿರುವ ಅಪಘಾತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಉಗ್ರಪ್ಪ ಇದೇ ವೇಳೆ ಆಗ್ರಹಿಸಿದರು.