ಮನೆ ದುರಸ್ತಿಗೆ 1ಲಕ್ಷ ರೂ ಪರಿಹಾರ: ಸಿಎಂ ಬಿಎಸ್ವೈ ಘೋಷಣೆ

ಮಂಗಳೂರು 12:  ಅತಿವೃಷ್ಠಿಯಿಂದ ಮನೆ ಹಾನಿಗೀಡಾದವರಿಗೆ ದುರಸ್ತಿ ಕಾರ್ಯ ಕೈಗೊಳ್ಳಲು ಒಂದು ಲಕ್ಷ ರೂ ನೆರವು ನೀಡಲಾಗುವುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ 

  ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪರಿಹಾರ ಘೋಷಿಸಿದರು.  

  ಪೂರ್ತಿಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣ ಮಾಡಲು  5 ಲಕ್ಷ ರೂ  ಪರಿಹಾರ ಮಂಜೂರು ಮಾಡಲಾಗುವುದು ಹಾಗೂ  ತಕ್ಷಣವೇ 10 ಸಾವಿರ ರೂ ನೀಡಲಾಗುವುದು. ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸಿಸುವುದಾದರೆ ಮಾಸಿಕ 5 ಸಾವಿರ ರೂ ಪರಿಹಾರ ಒದಗಿಸುವುದಾಗಿ ಹೇಳಿದರು.  ಮನೆ ಮಠ ಇಲ್ಲದ ನಿರಾಶ್ರಿತರಿಗೆ ಸರ್ಕಾರದಿಂದ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  

ಸೂರಿಲ್ಲದವರಿಗೆ ಸೂರು ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.  

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಗಸ್ಟ್ 16 ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಅವರ ಜತೆ ಮಾತುಕತೆ ನಡೆಸುವುದಾಗಿಯೂ ಸ್ಪಷ್ಟಪಡಿಸಿದರು.  ಪ್ರವಾಹ ನಿರ್ವಹಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.  

ರಾಜ್ಯದ 86 ತಾಲ್ಲೂಕುಗಳ 2964 ಹಳ್ಳಿಗಳು ನೆರೆಯಿಂದ ಜಲಾವೃತಗೊಂಡಿದ್ದು, 81,887 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 1181 ಪರಿಹಾರ ಕೇಂದ್ರಗಳನ್ನು ತೆರೆದು 3,32,629 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.  

ತಕ್ಷಣ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಕೇಂದ್ರದಿಂದ ಹೆಚ್ಚಿನ ನೆರವು ಬರುವ ನಿರೀಕ್ಷೆಯಿದೆ ಎಂದರು.  

 ಮಂಗಳವಾರ ಶಿವಮೊಗ್ಗ ಮತ್ತು ಸಾಗರಕ್ಕೆ ತೆರಳುತ್ತಿದ್ದು, ಅಲ್ಲಿಯೂ ಸಹ ನೆರೆ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸುವುದಾಗಿ ಯಡಿಯೂರಪ್ಪ ಹೇಳಿದರು. ಬಳಿಕ ಯಡಿಯೂರಪ್ಪ, ಭಾರಿ ಮಳೆಗೆ ಕೊಚ್ಚಿ ಹೋದ  ಬೆಳ್ತಂಗಡಿ ತಾಲೂಕಿನ ಕುಕ್ಕಾವು ಸೇತುವೆಯನ್ನು ಪರಿಶೀಲಿಸಿ, ಮಾಹಿತಿ ಪಡೆದರು. ಮಿತ್ತಬಾಗಿಲಿನಲ್ಲಿ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ಸಂಸದ  ನಳಿನ್ ಕುಮಾರ್  ಕಟೀಲ್  ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.