ನವದೆಹಲಿ,ಏಪ್ರಿಲ್ 25 ಮುಖ್ಯನ್ಯಾಯಮುರ್ತಿ ರಂಜನ್ ಗೋಗೊಯ್ ಅವರನ್ನು ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು, ನ್ಯಾಯಾಲಯದ ಸಿಬ್ಬಂದಿ ಹಾಗೂ ಪಿತೂರಿದಾರರು ಸಂಚು ನಡೆಸಿದ್ದಾರೆ ಎಂಬ ವಕೀಲರೊಬ್ಬರ ಹೇಳಿಕೆಯ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮುರ್ತಿ ಎ.ಕೆ. ಪಟ್ನಾಯಿಕ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ. ವಕೀಲ ಉತ್ಸವ್ ಬೈನ್ಸ್ ಅವರ ಆರೋಪಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ .ಕೆ. ಪಟ್ನಾಯಿಕ್ ಅವರನ್ನು ನೇಮಿಸಲಾಗಿದೆ ಎಂದು ನ್ಯಾಯಮುರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ನ್ಯಾಯಾಲಯದ ಕಲಾಪಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಕಾರ್ಪೊರೇಟ್ ವಲಯದ ಒಬ್ಬವ್ಯಕ್ತಿ ಹಾಗೂ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷಿ, ಪುರಾವೆಗಳನ್ನು ಸಮಿತಿಯ ಮುಂದೆ ಹಾಜರುಪಡಿಸುವಂತೆ ವಕೀಲ ಉತ್ಸವ್ ಬೈನ್ಸ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ವಿಚಾರಣೆಗೆ ಸಹಕಾರ ನೀಡುವಂತೆ ಸಿಬಿಐ ನಿರ್ದೇಶಕ ದೆಹಲಿ ಪೊಲೀಸ್ ಹಾಗೂ ಬೇಹುಗಾರಿಕೆಯ ಮುಖ್ಯಸ್ಥರಿಗೆ ಅಪೆಕ್ಸ್ ನ್ಯಾಯಾಲಯ ತಾಕೀತು ಮಾಡಿದೆ.