ಬೆಂಗಳೂರು, ಮೇ 20, ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, ಆರು ಮಂದಿ ಆರೋಪಿಗಳನ್ನು ಬಂಧಿಸಿ 3.73 ಲಕ್ಷ ರೂ. ಮೌಲ್ಯದ 384 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಸಿದ್ಧಾರ್ಥ ಲೇಔಟ್‌ನ ನಿವಾಸಿ ರಾಜು (32), ನಾಗರಭಾವಿ ಮಾರುತಿ ನಗರ 1ನೇ ಮೈನ್ ನಿವಾಸಿ ಅಮರ್ ಸಿ.ಎ (32), ಹೆಗ್ಗನಹಳ್ಳಿ ಮುಖ್ಯ ರಸ್ತೆಯ ವಿಶ್ವನೀಡಂ ಅಂಚೆ, ಮೋಹನ್ ಥಿಯೇಟರ್ ಹತ್ತಿರ ನಿವಾಸಿ ಲಕ್ಷ್ಮಯ್ಯ ಎಚ್ , ನಾಗರಬಾವಿ ಅನ್ನಪೂರ್ಣೇಶ್ವರಿ ನಗರ ಚೆಲುವ ನಾರಾಯಣ ಸ್ವಾಮಿ ಪ್ರಸನ್ನ 1ನೇ ಕ್ರಾಸ್ ನಿವಾಸಿ ವಿನಯ್, ಆರ್.ಆರ್.ನಗರ ಹಲಗೆವಡೆರಹಳ್ಳಿ 4ನೆ ಕ್ರಾಸ್ ಸೂರ್ಯ ನಾರಾಯಣ ಸ್ಟೋರ್ಸ್ ನಿವಾಸಿ ಪ್ರಕಾಸ್, (34), ರಾಜಗೋಪಾಲನಗರ ನಿವಾಸಿ ತಿಮ್ಮಪ್ಪ (42) ಬಂಧಿತ ಆರೋಪಿಗಳು.
ಬೇರೆ ಬೇರೆ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಯಾವುದೇ ಸುರಕ್ಷತೆ ಕ್ರಮಗಳನ್ನು ಅನುಸರಿಸದೆ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಪೀಣ್ಯ, ಕೆಂಗೇರಿ, ಕಾಮಾಕ್ಷಿಪಾಳ್ಯ, ವಿಜಯನಗರ, ಆರ್.ಆರ್.ನಗರ ಹಾಗೂ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳಿಂದ 3,73,150 ರೂ. ಬೆಲೆಬಾಳುವ 384 ಸಿಲಿಂಡರ್, ರೀಫಿಲ್ಲಿಂಗ್ ರಾಡುಗಳು, ತೂಕದ ಯಂತ್ರಗಳು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮವಾಗಿ ಪೀಣ್ಯ, ಕೆಂಗೇರಿ, ಪಾಮಾಕ್ಷಿಪಾಳ್ಯ, ವಿಜಯನಗರ, ಆರ್.ಆರ್.ನಗರ ಹಾಗೂರಾಜಗೋಪಾಲ ನಗರ ಪೊಲೀಸ್ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿಯ ಆರ್ಥಿಕ ಅಪರಾಧ ದಳ ಮತ್ತು ಸಂಘಟಿತ ಅಪರಾಧ ದಳದ ಅಧಿಕಾರಿಗಳು ತಿಳಿಸಿದ್ದಾರೆ.