ಬೆಂಗಳೂರು, ಮಾ.31, ಕೊರೋನಾ ವೈರಸ್ ಭೀತಿಯ ಸಂದರ್ಭದಲ್ಲೇ ಸಿಲಿಕಾನ್ ಸಿಟಿಯಲ್ಲಿ ನಕಲಿ ಮಾಸ್ಕ್‌ಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ನನ್ನು ಬಂಧಿಸಿದ್ದಾರೆ.ಬಾಣಸವಾಡಿಯ ಬಳಿಯ ಕಲ್ಯಾಣ ನಗರದ ಎಚ್ಆರ್‌ಬಿಆರ್ ಲೇಔಟ್, 2ನೇ ಬ್ಲಾಕ್, 4ನೇ ಡಿ ಕ್ರಾಸ್, 6ನೇ ಎ ಮುಖ್ಯ ರಸ್ತೆ, ಮನೆ ನಂಬರ್ 4ಡಿಸಿ/544ರಲ್ಲಿರುವ ಜಿಸ್ ಇಂಜಿನಿಯರಿಂಗ್, ಬಿಎನ್‌ಸಿ ಬೆಂಗಳೂರು ಡಯಾಬಿಟಿಕ್ ಸೆಂಟರ್ ಎಂಬ ಕೇಂದ್ರದಲ್ಲಿ ನಕಲಿ N95 ಮಾಸ್ಕ್ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಓರ್ವ ಆರೋಪಿ ಸೆರೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ. ಬಂಧಿತನನ್ನು ಅಸ್ಗರ್ ಎಂದು ಗುರುತಿಸಲಾಗಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೋರ್ವ ಆರೋಪಿ ಅಮೀರ್ ಅರ್ಷದ್ ಎಂಬಾತ ಪರಾರಿಯಾಗಿದ್ದಾನೆ.ಸ್ಥಳದಲ್ಲಿ 20 ಲಕ್ಷ ರೂ ಮೌಲ್ಯದ 12,300 ಮಾಸ್ಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಲ್ಲಿಯವರೆಗೆ 70 ಸಾವಿರ ರೂ ಮೌಲ್ಯದ ನಕಲಿ ಮಾಸ್ಕ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಸದ್ಯ ಬಾಣಸವಾಡಿ ಪೊಲೀಸರು ತಲೆಮರೆಸಿಕೊಂಡ ಆರೋಪಿಗಳಿಗೆ ಬಲೆ ಬೀಸಿದ್ದಾರೆ.