ಖಲಿಸ್ತಾನದ ಪ್ರತ್ಯೇಕತಾವಾದಿಯನ್ನು ಬಂಧಿಸಿದ ಸಿಸಿಬಿ

ಬೆಂಗಳೂರು, ಜ 12 :      ಖಲಿಸ್ತಾನದ ಪ್ರತ್ಯೇಕತಾವಾದಿಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್ ಸಿಂಗ್ ಸಿದ್ದು ಎಂಬಾತನನ್ನು ನಗರದ ಸಂಪಿಗೆಹಳ್ಳಿಯಲ್ಲಿ ಸಿಸಿಬಿ ಪೊಲೀಸರು  ಬಂಧಿಸಿದ್ದಾರೆ.  

ಸಿದ್ದು ಕಳೆದ 6 ತಿಂಗಳಿಂದ ಬೆಂಗಳೂರಿನ ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತ ಆರೋಪಿ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿಯಾಗಿದ್ದು, ಎಂಜಿನಿಯರ್ ಮಾಡಿಕೊಂಡು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ. ಜೊತೆಗೆ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಈತ ಸಿಖ್ ಧರ್ಮದವರಿಗಾಗಿಯೇ  

 ಪಂಜಾಬ್ನ್ನು ಪ್ರತ್ಯೇಕ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. 

ಸಿಖ್ ಧರ್ಮದ ವಿರುದ್ದ ಕೆಲಸ ಮಾಡುವವರ ವಿರುದ್ಧ ಜರ್ನಲ್ ಸಿಂಗ್ ಸಮರ ಸಾರಿದ್ದ.  ಅಲ್ಲದೇ, ಉಗ್ರ ಚಟುವಟಿಕೆಗಳಲ್ಲಿಯೂ ಈತ ಭಾಗಿಯಾಗಿದ್ದನು ಎನ್ನಲಾಗಿದೆ. 

ಪಾಕಿಸ್ತಾನದ ಐಎಸ್ಐ ಏಜೆಂಟ್ ನಿಹಾಲ್ ಸಿಂಗ್ ಜೊತೆಗೆ ಸಂಪರ್ಕದಲ್ಲಿದ್ದ ಈತ, ಪ್ರತ್ಯೇಕ ಖಲಿಸ್ತಾಬದ ಹೋರಾಟಕ್ಕೆ ನೆರವು ನೀಡಬೇಕು ಎಂದು ಏಜೆಂಟ್ ನಲ್ಲಿ ಮನವಿ ಮಾಡಿಕೊಂಡಿದ್ದ. ಹೀಗಾಗಿ ಈತನ ವಿರುದ್ದ ಪಂಜಾಬ್ನ ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್ಡಿ (ಆಂತರಿಕ ಭದ್ರತಾ ವಿಭಾಗ) ಪ್ರಕರಣ ದಾಖಲಿಸಿತ್ತು. ಮೊಹಾಲಿ ಸ್ಟೇಟ್ ಸ್ಪೆಷಲ್ ಆಪರೇಷನ್ ಸೆಲ್ ಪೊಲೀಸರು ಸಿಂಗ್ಗಾಗಿ ಶೋಧ ಕಾರ್ಯ ನಡೆಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಿದ್ದು, ಪಂಜಾಬ್ನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದನು. 

ನಗರದ ಬಾಗಮನೆ ಟೆಕ್ ಪಾರ್ಕ್ನಲ್ಲಿ ಈತ ಕೆಲಸಮಾಡಿಕೊಂಡಿದ್ದ ಎನ್ನಲಾಗಿದೆ.  

ಆರೋಪಿ ಸಿದ್ದು, ಬೆಂಗಳೂರಿಗೆ ಪರಾರಿಯಾಗಿರುವ ಸುಳಿವು ಪಡೆದ ಪಂಜಾಬ್ ಪೊಲೀಸರು, ಆರೋಪಿ ಪತ್ತೆ ಮಾಡುವಂತೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಮನವಿ ಮಾಡಿದ್ದರು. ಹೀಗಾಗಿ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ  ಬೆಂಗಳೂರು ಸಿಸಿಬಿ ಪೊಲೀಸರಿಗೆ ಇಂದು ಜರ್ನಲ್ ಸಿಂಗ್ ಸೆರೆಸಿಕ್ಕಿದ್ದಾನೆ.  

 ಸಿಸಿಬಿಯ ಒಸಿಡಬ್ಲೂ ವಿಂಗ್ನಿಂದ ಜರ್ನಲ್ ಸಿಂಗ್ನನ್ನು ಬಂಧಿಸಲಾಗಿದೆ.

ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.