ಸಿಎಬಿ-ಎನ್‌ಆರ್‌ಸಿ ವಿರುದ್ಧ ಕೋಲ್ಕತ್ತಾದಲ್ಲಿ ಇಂದು ಬೃಹತ್ ಸಮಾವೇಶ

ಕೋಲ್ಕತಾ, ಡಿ.16 ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಕೋಲ್ಕತಾದಲ್ಲಿಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನಾ ಜಾಥಾದಲ್ಲಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯಿಂದ ಜಾಥಾ ಮಧ್ಯಾಹ್ನ 1 ಗಂಟೆಗೆ ಆರಂಭಗೊಂಡು, ಜೊರಸಂಕೊ ಠಾಕೂರ್‌ಬರಿಯಲ್ಲಿ ಸಮಾರೋಪಗೊಳ್ಳಲಿದೆ.ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಮಾಜದ ಎಲ್ಲಾ ವರ್ಗಗಳ ಜನರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಬ್ಯಾನರ್ಜಿ ಮನವಿ ಮಾಡಿದ್ದಾರೆ. ಸಿಎಬಿ ಮತ್ತು ಎನ್‌ಆರ್‌ಸಿ ವಿರುದ್ಧ ತೃಣಮೂಲ ಕಾಂಗ್ರೆಸ್ ನಿಲುವು ತಳೆದಿದೆ.ಬಂಗಾಳದಲ್ಲಿ ಎನ್‌ಆರ್‌ಸಿ ಮತ್ತು ಸಿಎಬಿ ಜಾರಿಗೆ ಅವಕಾಶ ನೀಡುವುದಿಲ್ಲ. ಸಂಸತ್‌ನಲ್ಲಿ ಅಂಗೀಕಾರಗೊಂಡರೂ ನಾವು ಅದನ್ನು ಜಾರಿಗೊಳಿಸುವುದಿಲ್ಲ. ನಮ್ಮನ್ನು ಹೆದರಿಸಿ ಇದನ್ನು ಜಾರಿಗೊಳಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.