ಸಿಎಎ ಯಾವೊಬ್ಬ ಭಾರತೀಯನ ಪೌರತ್ವ ಕಸಿದುಕೊಳ್ಳುವುದಿಲ್ಲ : ಮೋದಿ

ಕೋಲ್ಕತಾ, ಜ 12:       ಪೌರತ್ವ ತಿದ್ದುಪಡಿ ಕಾಯ್ದೆ  (ಸಿಎಎ) ಸಂಬಂಧ  ದೇಶಾದ್ಯಂತ   ಅದರಲ್ಲೂ ಅಲ್ಪಸಂಖ್ಯಾತ  ಮುಸ್ಲಿಂ  ಸಮುದಾಯದಲ್ಲಿ  ಸೃಷ್ಟಿಯಾಗಿರುವ  ಆತಂಕಗಳನ್ನು ತೊಲಗಿಸಲು    ಪ್ರಧಾನಿ  ನರೇಂದ್ರ  ಮೋದಿ  ಭಾನುವಾರ ಇಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರು.   

ನೆರೆಯ  ಮೂರು ದೇಶಗಳಲ್ಲಿ  ಧಾರ್ಮಿಕ  ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬರುವ  ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸುವುದು  ಸಿಎಎ  ಕಾಯ್ದೆಯ  ಉದ್ದೇಶವಾಗಿದೆ ಎಂದು ಅವರು  ಸ್ಪಷ್ಟಪಡಿಸಿದರು. 

ಕೋಲ್ಕತ್ತಾದ ಹೊರವಲಯದ ಬೇಲೂರು ಮಠದಲ್ಲಿ ಭಾನುವಾರ  ಆಯೋಜಿಸಿದ್ದ  ಸಮಾರಂಭದಲ್ಲಿ  ಪಾಲ್ಗೊಂಡು ಮಾತನಾಡಿದ   ಪ್ರಧಾನಿ ನರೇಂದ್ರ ಮೋದಿ,  ಸಿಎಎ ಕಾಯ್ದೆಯ  ಆದ್ಯತೆ ಏನು ಎಂಬುದನ್ನು ವಿಶೇಷವಾಗಿ  ಯುವಜನರು  ಕೂಲಂಕುಶವಾಗಿ  ಅರಿತುಕೊಳ್ಳಬೇಕು. ನಮ್ಮ  ಸುತ್ತಮುತ್ತ  ಅನೇಕ ವದಂತಿಗಳನ್ನು  ಹಬ್ಬಿಸಲಾಗುಗುತ್ತಿದೆ.  ಯುವಜನಾಂಗ  ಇಂತಹ ಅಪ ಪ್ರಚಾರಗಳಿಗೆ ಯಾವುದೇ ಕಾರಣಕ್ಕೂ   ಕಿವಿಕೊಡಬಾರದು ಎಂದು  ಮನವಿ ಮಾಡಿದರು. 

 ಈ ವದಂತಿ ಹಬ್ಬಿಸುವವರಿಗೆ  ವಾಸ್ತವಿಕ ಮಾಹಿತಿಯೊಂದಿಗೆ ಉತ್ತರಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಪೌರತ್ವ ಕಾಯ್ದೆಯನ್ನು ಒಂದೇ ದಿನದಲ್ಲಿ  ಜಾರಿಗೊಳಿಸುವ ಕಾಯ್ದೆಯಲ್ಲ  ಎಂಬುದನ್ನು ಈಶಾನ್ಯ ಮತ್ತು ಬಂಗಾಳದ ಜನರು ಮನಗಂಡಿದ್ದಾರೆ ಎಂದರು. 

ಯಾವುದೇ  ಅನ್ಯ ದೇಶದಿಂದ ಇಲ್ಲಿಗೆ ಬರುವ  ಯಾರೇ ಆಗಿರಲಿ,  ಅವರು ಭಾರತದ ಸಂವಿಧಾನವನ್ನು ಪಾಲಿಸಿದರೆ ಭಾರತದ ಪ್ರಜೆಯಾಗುತ್ತಾರೆ ಎಂಬುದನ್ನು ನಾವು  ತಿಳಿದುಕೊಂಡಿದ್ದೇವೆ.  ಸಿಎಎ ಕೇವಲ  ಈ ಕಾಯ್ದೆಗೆ   ಮಾಡಿರುವ ತಿದ್ದುಪಡಿ ಮಾತ್ರ. ನಾವು ಸಿಎಎ ಕಾಯ್ದೆಗೆ  ಬದಲಾವಣೆ ತಂದಿದ್ದೇವೆ. ಇತರ ದೇಶಗಳಲ್ಲಿ  ಸಂಕಷ್ಟ ಎದುರಿಸುತ್ತಿರುವವರಿಗೆ ಪೌರತ್ವಕ್ಕೆ ದಾರಿ ಮಾಡಿಕೊಡುತ್ತೀದ್ದೇವೆ ಎಂದು ಅವರು ಹೇಳಿದರು.  

ಸಿಎಎ ಮೂಲಕ ಅಲ್ಪಸಂಖ್ಯಾತರ  ಬೆಂಬಲಕ್ಕೆ  ನಿಲ್ಲಬೇಕೆಂಬ ಮಹಾತ್ಮ ಗಾಂಧಿಯವರ  ಆಶಯ,  ಕನಸುಗಳನ್ನು  ಸರ್ಕಾರ ಸಾಕಾರಗೊಳಿಸಿದೆ. ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಚಿತ್ರಹಿಂಸೆಗೊಳಗಾದ  ಜನರಿಗೆ  ಭಾರತದಲ್ಲಿ ಮಾನವೀಯತೆಯಿಂದ   ಪೌರತ್ವ  ಕಲ್ಪಿಸಸಬೇಕು ಎಂದು    ಮಹಾತ್ಮ ಗಾಂಧಿ ಸೇರಿ ದೇಶದ   ಹಲವು ನಾಯಕರು  ಪದೇ ಪದೇ ಹೇಳಿದ್ದರು  ಎಂದು ಮೋದಿ  ಸ್ಮರಿಸಿದರು.   ಸಿಎಎಯಿಂದಾಗಿ  ದೇಶದ ಯಾವುದೇ  ನಾಗರೀಕ  ತಮ್ಮ ಪೌರತ್ವ ಹಕ್ಕು  ಕಳೆದುಕೊಳ್ಳುವುದಿಲ್ಲ  ಎಂದು ಅವರು ಪುನರುಚ್ಚರಿಸಿದರು.