ಭೋಪಾಲ್ , ಜನವರಿ 29, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವದ ಯೋಜನೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬಿಜೆಪಿಯ ಶಾಸಕ ನಾರಾಯಣ ತ್ರಿಪಾಠಿ ಪ್ರಬಲ ವಿರೋಧ ಮಾಡಿ, ಇದು ದೇಶಕ್ಕೆ ಮಾರಕ ಎಂದು ಮುಖಕ್ಕೆ ಹೊಡೆದ ಹಾಗೆ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಕಾಯಿದೆ ವಿರುದ್ದ ದೇಶದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಗಳಿಗೆ ವಿರುದ್ಧವಾಗಿ ಬಿಜೆಪಿಯೂ ಸಮಾವೇಶ ನಡೆಸುತ್ತಿರುವಾಗಲೇ ಮಧ್ಯಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಇದು ದೇಶಕ್ಕೆ ಮಾರಕವಾಗಲಿದೆ ಎಂದೂ ಆತಂಕ, ಆಕ್ಷೇಪ ವ್ಯಕ್ತಪಡಿಸಿದ್ದಾರೆ .
ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸ್ವಪಕ್ಷದ ಸರಕಾರ, ನಾಯಕರ ವಿರುದ್ದವೇ ತಿರುಗಿ ಬಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ್ದಾರೆ. ದೇಶದ ಬೀದಿ ಬೀದಿಗಳಲ್ಲಿ ಆಂತರಿಕ ಯುದ್ದ ನಡೆಯುತ್ತಿದೆ. ಆದರೆ ಇದು ದೇಶಕ್ಕೆ ಮಾರಕ. ಇಂತಹ ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದೂ ತ್ರಿಪಾಠಿ ಅಭಿಪ್ರಾಯ ಪಟ್ಟಿದ್ದಾರೆ. ನಾವು ದೇಶದ ಸಂವಿಧಾನದ ಪ್ರಕಾರ ದೇಶ ನಡೆಸಬೇಕು. ಇಲ್ಲವಾದರೆ ಬಿಜೆಪಿ ಹೊಸ ಸಂವಿಧಾನ ಜಾರಿಗೆ ತರಲಿ ಎಲ್ಲರಿಗೂ ಸಮಾನತೆ ನೀಡುವ ಅಂಬೇಡ್ಕರ್ ರಚಿತ ಸಂವಿಧಾನ ಹರಿದು ಬಿಸಾಡಲಿ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಸಾಧ್ಯವಿಲ್ಲ, ಅವಕಾಶವೂ ಇಲ್ಲ ಎಂದೂ ಅವರು ತಿರುಗೇಟು ನೀಡಿದ್ದಾರೆ.